ಇನ್ನೋರ್ವ ಆದಾಯ ತೆರಿಗೆ ಅಧಿಕಾರಿ ಆತ್ಮಹತ್ಯೆಗೆ ಶರಣು; ಕೊರೋನ ಸೋಂಕಿನ ಭೀತಿ ಕಾರಣ?

ಹೊಸದಿಲ್ಲಿ, ಜೂ.16: ಭಾರತೀಯ ಕಂದಾಯ ಸೇವೆ (ಐಆರ್‌ಎಸ್)ಯ ಅಧಿಕಾರಿ ಶಿವರಾಜ್ ಸಿಂಗ್ ರವಿವಾರ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿಲ್ಲಿಯ ದ್ವಾರಕಾ ವಸತಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಅವರ ಶವಪತ್ತೆಯಾಗಿದೆ. 56 ವರ್ಷ ವಯಸ್ಸಿನ ಶಿವರಾಜ್ ಸಿಂಗ್ ಅವರು ಕಳೆದ ಕೆಲವು ವಾರಗಳಲ್ಲಿ ಆತ್ಮಹತ್ಯೆಗೆ ಶರಣಾದ ಆದಾಯ ತೆರಿಗೆ ಇಲಾಖೆಯ ಎರಡನೆ ಅಧಿಕಾರಿ ಯಾಗಿದ್ದಾರೆ. ಮೃತದೇಹ ಪತ್ತೆಯಾದ ಕಾರಿನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಯ ತೆರಿಗೆ ನಿರ್ದೇಶನಾಲಯದ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರಾದ ಶಿವರಾಜ್‌ಸಿಂಗ್ ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಹಾಗೂ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಆರ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಗೆ ಕೋವಿಡ್-19 ಸೋಂಕು ತಗಲಿರುವ ಸಾಧ್ಯತೆಯಿದ್ದು, ಅದು ತನ್ನ ಕುಟುಂಬಕ್ಕೂ ಹರಡಬಹುದೆಂಬ ಭೀತಿಯಿಂದ ತಾನು ಆತ್ಮಹತ್ಯೆಗೆ ಶರಣಾಗಿರುವುದಾಗಿ ಸಿಂಗ್ ಸೂಸೈಡ್‌ನೋಟ್‌ನಲ್ಲಿ ಬರೆದಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.







