ಸೇತುವೆಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಬ್ರಹ್ಮಾವರ, ಜೂ.15: ನಿಯಂತ್ರಣ ತಪ್ಪಿದ ಬೈಕೊಂದು ರಾಷ್ಟ್ರೀಯ ಹೆದ್ದಾರಿ 66ರ ಹೇರೂರು ಗ್ರಾಮದ ಭದ್ರಗಿರಿ ಸೇತುವೆಯ ಸಿಮೆಂಟಿನ ದಂಡೆಗೆ ಡಿಕ್ಕಿ ಹೊಡೆದು ಪರಿಣಾಮ ಓರ್ವ ಸವಾರ ಮೃತಪಟ್ಟ, ಇನ್ನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಜೂ.14 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬೈಕ್ ಸವಾರ ವಿಠಲ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸಹಸವಾರ ಸೂರಪ್ಪಮರಕಾಲ ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಹೇರೂರಿನಿಂದ ಉಡುಪಿಯ ತೊಟ್ಟಂಗೆ ಹೋಗುತ್ತಿದ್ದ ಬೈಕ್, ನಿಯಂತ್ರಣ ತಪ್ಪಿ ಸೇತುವೆಯ ದಂಡೆಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಸವಾರರಿಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯಗೊಂಡ ವಿಠಲ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10ಗಂಟೆ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





