ದಸಂಸ ಹುಟ್ಟು ಹಾಕದಿದ್ದರೆ ದಲಿತರಿಗೆ ಧ್ವನಿಯೇ ಇರುತ್ತಿರಲಿಲ್ಲ: ಸುಂದರ್ ವಾಸ್ತರ್

ಉಡುಪಿ, ಜೂ.15: ದಸಂಸ ಸಂಘಟನೆಯನ್ನು ಪ್ರೊ.ಬಿ.ಕೃಷ್ಣಪ್ಪ ಹುಟ್ಟು ಹಾಕದೇ ಇರುತ್ತಿದ್ದರೆ ಇಂದು ದಲಿತರಿಗೆ ಧ್ವನಿಯೇ ಇರುತ್ತಿರಲಿಲ್ಲ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ರವಿವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರೊ.ಕೃಷ್ಣಪ್ಪ ಕೊನೆಯ ಭಾಷಣವನ್ನು ಉಡುಪಿಯಲ್ಲಿ ಮಾಡಿದ್ದರು. ಇಲ್ಲಿನ ಕಾರ್ಯಕ್ರಮ ಮುಗಿಸಿ ಹೋಗಿ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸು ವಾಗ ಅವರು ಹೃದಯಾಘಾತಕ್ಕೆ ಒಳಗಾಗಿ ನಮ್ಮನ್ನಗಲಿದರು ಎಂದು ಅವರು ತಿಳಿಸಿದರು.
ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಬೂಸಾ ಚಳುವಳಿಯ ನಂತರ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡ ಬಗೆ ಮತ್ತು ಅದು ರಾಜ್ಯಾದ್ಯಂತ ಚಳುವಳಿಯಾಗಿ ರೂಪುಗೊಂಡ ಬಗೆಯನ್ನು ವಿವರಿಸಿದರು. ದಲಿತ ಸಂಘರ್ಷ ಸಮಿತಿಯನ್ನು ಕಟ್ಟಲು ಇಡೀ ರಾಜ್ಯ ಸುತ್ತಾಡುತಿದ್ದ ಕೃಷ್ಣಪ್ಪರ ಕಾರ್ಯವನ್ನು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್, ಅಣ್ಣಪ್ಪನಕ್ರೆ, ಮುಖಂಡರಾದ ಶಂಕರ್ ದಾಸ್ ಚೆಂಡ್ಕಳ, ಮಂಜುನಾಥ್ ಬಾಳ್ಕುದ್ರು, ಪ್ರವೀಣ್ ಕುಮಾರ್, ವಿಠ್ಠಲ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.







