ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಳಾಂತರಿತ ಕಚೇರಿ ಉದ್ಘಾಟನೆ

ಮಂಗಳೂರು, ಜೂ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಳಾಂತರಿತ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ನಗರದ ರೈಲ್ವೆ ನಿಲ್ದಾಣ ರಸ್ತೆಯ ಮಂಗಳೂರು ತಾಪಂ ಕಚೇರಿ ಬಳಿಯ ಕಟ್ಟಡದಲ್ಲಿ ನಡೆಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಾಂತರಿತ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಅಕಾಡಮಿಯು ಕೊರೋನ-ಲಾಕ್‌ಡೌನ್ ಅವಧಿಯಲ್ಲಿ ಜನಪರ ಕೆಲಸ ಮಾಡಿದೆ. ಸ್ವಂತ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಅಕಾಡಮಿಯು ಸರಕಾರದ ಮುಂದಿಟ್ಟಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ತಾಪಂ ಇಒ ಸದಾನಂದ, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಭಾಗವಹಿಸಿದ್ದರು. ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು. ಸದಸ್ಯರಾದ ಜಲೀಲ್ ಮುಕ್ರಿ, ಮಿಶ್ರಿಯಾ ಮೈಸೂರು, ಚಂಚಲಾಕ್ಷಿ, ಸುರೇಖಾ, ಮುರಳಿ, ರೂಪೇಶ್ ಕುಮಾರ್ ಉಪಸ್ಥಿತರಿದ್ದರು.
ಬ್ಯಾರಿ ಭವನಕ್ಕೆ ಹೊಸ ನಿವೇಶನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಬ್ಯಾರಿ ಭವನ ನಿರ್ಮಿಸಲು ಈ ಹಿಂದೆ ನೀರು ಮಾರ್ಗದಲ್ಲಿ 25 ಸೆಂಟ್ಸ್ ಜಮೀನನ್ನು ಗುರುತಿಸಲಾಗಿತ್ತು. ಕಾರಣಾಂತರದಿಂದ ಅದನ್ನು ಸರಕಾರಕ್ಕೆ ಮರಳಿಸಲಾಗಿದೆ. ಹೊಸ ನಿವೇಶನ ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಬ್ಯಾರಿ ಭವನ ನಿರ್ಮಿಸುವ ಸಲುವಾಗಿಯೇ ಸರಕಾರ 6 ಕೋ.ರೂ. ಮಂಜೂರು ಮಾಡಿದೆ. ಆ ಪೈಕಿ 3 ಕೋ.ರೂ. ಬಿಡುಗಡೆಯಾಗಿದೆ. ನಿವೇಶನ ಸಿಕ್ಕಿದ ತಕ್ಷಣ ಬ್ಯಾರಿ ಭವನ ನಿರ್ಮಿಸಿ ಅಕಾಡಮಿಯ ಕಚೇರಿಯನ್ನು ಅಲ್ಲಿ ತೆರೆಯಲಾಗುವುದು ಎಂದರು.
ಅಕಾಡಮಿಯು ಕೊರೋನ-ಲಾಕ್‌ಡೌನ್ ಅವಧಿಯಲ್ಲಿ ಕಾಲಹರಣ ಮಾಡಲಿಲ್ಲ. ನಿರಂತರ ಕೆಲಸ ಮಾಡುತ್ತಾ ಬಂದಿದೆ. ಲಾಕ್‌ಡೌನ್ ಸಂದರ್ಭ ಸಂಕಷ್ಟಕ್ಕೀಡಾದ 261 ಸಾಹಿತಿ-ಕಲಾವಿದರಿಗೆ ತಲಾ 2 ಸಾವಿರ ರೂ. ಸಹಾಯಧನ ನೀಡಲಾಗಿದೆ. ಅರ್ಹ 140 ಮಂದಿಗೆ ಆಹಾರ ಧಾನ್ಯದ ಕಿಟ್ ನೀಡಲಾಗಿದೆ. ಬ್ಯಾರಿ ಕವನ ಸ್ಪರ್ಧೆ, ಮೆಹಂದಿ ಸ್ಪರ್ಧೆ ಆಯೋಜಿಸಿತ್ತು. ಇದೀಗ ‘ಮರಕೊಗು ಆವಾತೆ 100 ಬ್ಯಾರಿಙ’ ಗ್ರಂಥ ರಚನೆ, ಬ್ಯಾರಿ ಸಾಹಿತಿ-ಕಲಾವಿದರ ಸಂಪರ್ಕಕ್ಕಾಗಿ ಬ್ಯಾರಿ ಡೈರಿ ರಚನೆ, ಬ್ಯಾರಿ ಅರ್ಚೊ ಮಸಲೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.









