ಉದ್ಯೋಗ ಸ್ಥಳಗಳಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳ ಮೌಲ್ಯಮಾಪನಕ್ಕೆ ಆನ್‌ಲೈನ್ ಸಾಧನ
ಬೆಂಗಳೂರು, ಜೂ.15: ಕೋರೊನ ವೈರಸ್ ಹಾವಳಿ ತಡೆಗೆ ಹೇರಲಾಗಿದ್ದ ಲಾಕ್‌ಡೌನ್ ಹಂತಹಂತವಾಗಿ ಸಡಿಲುಗೊಳ್ಳುತ್ತಿರುವಂತೆಯೇ ಕಚೇರಿಗಳು, ಕಾರ್ಖಾನೆಗಳು ಕಾರ್ಯಾರಂಭಿಸತೊಡಗಿವೆ. ಈ ಸನ್ನಿವೇಶದಲ್ಲಿ ಕೆಲಸದ ಸ್ಥಳಗಳಲ್ಲಿ ಕೊರೋನ ವೈರಸ್ ಸೋಂಕು ತಲೆಯೆತ್ತದಂತೆ ತಡೆಯಲು ಸಂಸ್ಥೆಗಳು ಕೈಗೊಂಡಿರುವ ಕ್ರಮಗಳ ವೌಲ್ಯಮಾಪನಕ್ಕಾಗಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳ ತಂಡವೊಂದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದಲ್ಲಿ ಅತ್ಯಾಧುನಿಕ ಆನ್‌ಲೈನ್ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ.
‘ಕೋವಿಡ್-19 ಕಾರ್ಯಸ್ಥಳ ಸನ್ನದ್ಧತಾ ಸೂಚಕ’ (ಕೋವಿಡ್-19 ವರ್ಕ್‌ಪ್ಲೇಸ್ ರೆಡಿನೆಸ್ ಇಂಡಿಕೇಟರ್) ಎಂದು ಹೆಸರಿಡಲಾದ ಈ ಉಪಕರಣವು ಸೋಂಕು ತಡೆಗಟ್ಟಲು ಸಂಸ್ಥೆಯು ಎಷ್ಟರ ಮಟ್ಟಿಗೆ ಸನ್ನದ್ಧವಾಗಿದೆ ಎಂಬ ಬಗ್ಗೆ ಅಂಕಗಳನ್ನು ನೀಡುವುದು. ಇದರ ಜೊತೆಗೆ ಸೋಂಕು ತಡೆಗಟ್ಟಲು ಕೈಗೊಳ್ಳಲಾದ ಕ್ರಮಗಳಲ್ಲಿ ಯಾವುದೇ ನಿರ್ದಿಷ್ಟ ದೌರ್ಬಲ್ಯಗಳು ಪತ್ತೆಯಾದಲ್ಲಿ, ಸಲಹೆಗಳನ್ನು ಕೂಡಾ ನೀಡಲಿದೆ ಎಂದು ಈ ಉಪಕರಣದ ಅಭಿವೃದ್ಧಿಗೆ ನೆರವಾಗಿರುವ ಸಿಸ್ಕೊ-ಐಐಎಸ್‌ಸಿಯ ಪಿಎಚ್‌ಡಿ ಸಂಶೋಧಕ ನಿಹೇಶ್ ರಾಥೋಡ್ ಹೇಳಿದ್ದಾರೆ.
ಲಾಕ್‌ಡೌನ್ ಸಡಿಲಿಕೆಗೆ ಸಂಬಂಧಿಸಿ ತಾನು ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿ ತಮ್ಮ ಕಾರ್ಯಾಚರಣೆಗಳನ್ನು ಆರಂಭಿಸಿರುವ ವಿವಿಧ ಸಂಘಸಂಸ್ಥೆಗಳು ಸಲಹಾ ಉಪಕರಣವನ್ನು ಬಳಸಿಕೊಳ್ಳಬೇಕೆಂದು ರಾಜ್ಯ ಸರಕಾರವು ಶಿಫಾರಸು ಮಾಡಿದೆ.







