ಜೂ. 19-30: ಚೆನ್ನೈನಲ್ಲಿ ಮತ್ತೆ ಲಾಕ್ಡೌನ್
ಚೆನ್ನೈ.ಜೂ.15: ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ದಾರಿಕಾಣದ ತಮಿಳುನಾಡು ಸರಕಾರವು ಮತ್ತೆ ಲಾಕ್ಡೌನ್ ಅಸ್ತ್ರಕ್ಕೆ ಮೊರೆಹೋಗಿದೆ.
ಜೂನ್ 19ರಿಂದ ಜೂನ್ 30ರವರೆಗೆ ಚೆನ್ನೈ ಮಹಾನಗರ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಲಾಕ್ಡೌನ್ ಹೇರಲಾಗಿದ್ದು, ಈಗ ಇರುವ ಎಲ್ಲಾ ಸಡಿಲಿಕೆಗಳನ್ನು ರದ್ದುಪಡಿಸಿದೆ. ಈ ಅವಧಿಯಲ್ಲಿ ಎರಡು ರವಿವಾರಗಳಂದು ಪೂರ್ಣ ಪ್ರಮಾಣದ ಲಾಕ್ಡೌನ್ ಇರಲಿದೆ ಎಂದು ಮುಖ್ಯಮಂತ್ರಿ ಕೆ.ಪಲನಿಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ತಜ್ಞರ ಸಮಿತಿಯ ಜೊತೆ ಮಾತುಕತೆ ನಡೆಸಿದ ಬಳಿಕ ಪಲನಿಸ್ವಾಮಿ ಲಾಕ್ಡೌನ್ ಹೇರಿಕೆ ನಿರ್ಧಾರವನ್ನು ಘೋಷಿಸಿದರು.
ಚೆನ್ನೈ ಮಹಾನಗರ ಪೊಲೀಸ್ ಕಮೀಶನರೇಟ್ ವ್ಯಾಪ್ತಿಗೆ ಬರುವ ಹಾಗೂ ತಿರುವಲ್ಲೂರು, ಚೆಂಗಲ್ಪೇಟೆ ಹಾಗೂ ಕಾಂಚಿಪುರ ಜಿಲ್ಲೆಗಳಲ್ಲಿ ಈ ಲಾಕ್ಡೌನ್ ಜಾರಿಗೆ ಬರಲಿದೆ ಎಂದವರು ಹೇಳಿದರು. 12 ದಿನಗಳ ಅವಧಿಯ ಈ ಲಾಕ್ಡೌನ್ನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದೆಂದು ಅವರು ಹೇಳಿದರು. ತುರ್ತುಸನ್ನಿವೇಶಗಳನ್ನು ಹೊರತುಪಡಿಸಿ ಯಾವುದೇ ಟ್ಯಾಕ್ಸಿಗಳು, ಆಟೋಗಳು ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಜನರು ತಮ್ಮ ನಿವಾಸದ 2 ಕಿ.ಮೀ. ವ್ಯಾಪ್ತಿಯ ಪ್ರದೇಶೊಳಗೆ ಮಾತ್ರವೇ ಅವಶ್ಯಕ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ. ಕೇವಲ ಆಸ್ಪತ್ರೆಗಳು, ಪ್ರಯೋಗಾ ಲಯಗಳು ಹಾಗೂ ಫಾರ್ಮಸಿಗಳ ಕಾರ್ಯನಿರ್ವಹಣೆಗೆ ಮಾತ್ರ ಅನುಮತಿ ನೀಡಲಾಗಿದೆ.