ಆನ್‍ಲೈನ್ ಶಿಕ್ಷಣದ ಮಾರ್ಗಸೂಚಿ ಸಿದ್ಧಪಡಿಸಲು ಡಾ.ಎಂ.ಕೆ.ಶ್ರೀಧರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
ಬೆಂಗಳೂರು, ಜೂ.15: ಕೋವಿಡ್-19 ಹಿನ್ನೆಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಎಂ.ಕೆ.ಶ್ರೀಧರ್ ಅಧ್ಯಕ್ಷತೆಯಲ್ಲಿ 10 ಸದಸ್ಯರೊಳಗೊಂಡ ಸಮಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರಚಿಸಿದೆ.
ಸಮಿತಿಯ ಸದಸ್ಯರು: ಶಿಕ್ಷಣ ತಜ್ಞರಾದ ಡಾ.ಗುರುರಾಜ್ ಕರ್ಜಗಿ, ಡಾ.ವಿ.ಪಿ.ನಿರಂಜನಾರಾಧ್ಯ, ಅಜೀಮ್ ಪ್ರೇಮ್ ಜಿ ಫೌಂಡೇಷನ್‍ನ ಹೃಷಿಕೇಶ್, ನಿಮ್ಹಾನ್ಸ್ ಸಂಸ್ಥೆಯ ಮುಖ್ಯಸ್ಥ, ಅರ್ಲಿ ಚೈಲ್ಡ್ಸ್ ಹುಡ್ ಸಂಘಟನೆಯ ಪ್ರತಿನಿಧಿಗಳು, ರಾಜ್ಯ, ಐಸಿಎಸ್ಸಿ, ಸಿಬಿಎಸ್ಸಿ, ಅಂತರ್‍ರಾಷ್ಟ್ರೀಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್, ಸಮಗ್ರ ಶಿಕ್ಷಣದ ನಿರ್ದೇಶಕ ಗೋಪಾಲಕೃಷ್ಣ, ಡಿಎಸ್‍ಇಆರ್‍ಟಿ ನಿರ್ದೇಶಕ ಎಂ.ಆರ್.ಮಾರುತಿ ಹಾಗೂ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿಯ ಜವಾಬ್ದಾರಿಗಳು
-6ರಿಂದ 10ನೇ ತರಗತಿಯವರೆಗೆ ಆನ್‍ಲೈನ್ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ, ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವಲ್ಲಿ ಮಾರ್ಗಸೂಚಿಗಳನ್ನು ರಚಿಸುವುದು.
-ಎಲ್‍ಕೆಜಿಯಿಂದ 5ನೇ ತರಗತಿವರೆಗೆ ಆನ್‍ಲೈನ್ ಹೊರತುಪಡಿಸಿ ಸಮೂಹ ಮಾಧ್ಯಮಗಳು, ತಂತ್ರಜ್ಞಾನಾಧಾರಿತವಾದ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಮಾರ್ಗಸೂಚಿಗಳನ್ನು ರಚಿಸುವುದು.
-ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಬೇಕು. ಸಾಂಪ್ರದಾಯಕ ತರಗತಿಗಳಿಗೆ ಪರ್ಯಾಯ ಎನ್ನುವ ಭಾವನೆ ಮೂಡದಂತೆ ಮಕ್ಕಳ ಕಲಿಕೆಗೆ ಪ್ರೇರೇಪಣೆ ಹಾಗೂ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ತಂತ್ರಜ್ಞಾನ ಬಳಕೆ ಹೇಗಿರಬೇಕು. ವಯೋಮಾನಕ್ಕನುಗುಣವಾಗಿ ವಿದ್ಯಾರ್ಥಿಯ ಏಕಾಗ್ರತಾ ಸಾಮರ್ಥ್ಯ, ತಂತ್ರಜ್ಞಾನ ಉಪಕರಣಗಳ ಬಳಕೆಯಿಂದ ಉಂಟಾಗುವ ಅರೋಗ್ಯದ ಮೇಲಿನ ಪರಿಣಾಮಗಳ ಕುರಿತು ವರದಿ ಸಿದ್ಧಪಡಿಸಬೇಕು. ಇನ್ನಿತರ ವಿಷಯಗಳ ಕುರಿತು ವರದಿ ಸಲ್ಲಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸಮಿತಿಯು ಕಡ್ಡಾಯವಾಗಿ ಹತ್ತು ದಿನದೊಳಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕೊಠಡಿ, ಪರಿಕರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಒದಗಿಸಲಿದ್ದಾರೆ.







