ಸರಕಾರಿ ಸ್ವಾಮ್ಯದಲ್ಲೇ ಮೈಶುಗರ್ ಆರಂಭಕ್ಕೆ ಒತ್ತಾಯ: ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ

ಮಂಡ್ಯ, ಜೂ.15: ಮೈಶುಗರ್ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಖಾನೆಯನ್ನು ಸರಕಾರವೇ ಉಳಿಸಿಕೊಂಡು ನಿರ್ವಹಣೆ ಮಾಡಬೇಕು. ಜುಲೈ ತಿಂಗಳ ಪ್ರಾರಂಭದಲ್ಲೇ ಕಬ್ಬು ನುರಿಸಲು ಅಗತ್ಯಕ್ರಮ ಕೈಗೊಳ್ಳಬೇಕು. ಕಾರ್ಖಾನೆಗಳ ಆಡಳಿತ ಮಂಡಳಿ, ಚುನಾಯಿತ ಪ್ರತಿನಿಧಿಗಳು, ಕಬ್ಬುಬೆಳೆಗಾರರು, ಸಂಘಟನೆಗಳ ಮುಖಂಡರ ಸಭೆ ಕರೆಯುವಂತೆ ಒತ್ತಾಯಿಸಲಾಯಿತು.
ಹೋರಾಟದ ಹಿನ್ನೆಲೆಯಲ್ಲಿ ಕಾರ್ಖಾನೆಯ ಖಾಸಗೀಕರಣವನ್ನು ಸರಕಾರ ಕೈಬಿಟ್ಟಿದೆ. ಆದರೆ, ಅದರೆ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು( ಒ ಅಂಡ್ ಎಂ) ಖಾಸಗಿ ಕಂಪನಿಗೆ ವಹಿಸಲು ಮುಂದಾಗುತ್ತಿರುವುದು ಅಪಾಯಕಾರಿ ನಡೆಯಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಕಾರ್ಖಾನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಕೈಗೆ ನೀಡಿದರೆ, ಆರಂಭಿಸಿ ನಷ್ಟ ತೋರಿಸಿ ಇಡೀ ಕಾರ್ಖಾನೆ ಮತ್ತು ಅದಕ್ಕೆ ಸಂಬಂಧಿಸಿದ ಆಸ್ತಿಯನ್ನೇ ಕಬಳಿಸುತ್ತಾರೆ ಎಂಬುದನ್ನು ಸರಕಾರ, ಸಂಸದರು ಮತ್ತು ಒ ಅಂಡ್ ಎಂ ಪರ ಒಲವು ತೋರುತ್ತಿರುವವರು ಅರಿಯಬೇಕಿದೆ ಎಂದು ಅವರು ಸಲಹೆ ನೀಡಿದರು.
ಸಹಕಾರಿ ಕ್ಷೇತ್ರದ ಪಿಎಸ್‍ಎಸ್‍ಕೆಯನ್ನು 40 ವರ್ಷಗಳಿಗೆ ಮುರುಗೇಶ್ ನಿರಾಣಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ನಿರಾಣಿ ಇತ್ತೀಚೆಗೆ ಸರಕಾರದ ಎಲ್ಲಾ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಿ ಎಂದು ಹೇಳಿರುವುದು ಖಾಸಗೀ ಲಾಭಕೋರ ನೀತಿಯ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಸಂಘಟನೆಗಳ ಮುಖಂಡರಾದ ಸಿ.ಕುಮಾರಿ, ಎಂ.ಬಿ.ಶ್ರೀನಿವಾಸ್, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸುಧೀರ್‍ಕುಮಾರ್, ಎಂ.ಪುಟ್ಟಮಾದು, ಟಿ.ಎಲ್.ಕೃಷ್ಣೇಗೌಡ, ಹೆಮ್ಮಿಗೆ ಚಂದ್ರಶೇಖರ್, ಉಮೇಶ, ಅಂದಾನಿ, ಎಚ್.ಸಿ.ಮಂಜುನಾಥ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಒತ್ತಾಯಗಳು
ಮೈಶುಗರ್, ಪಿಎಸ್‍ಎಸ್‍ಕೆ ಹಾಗೂ ಖಾಸಗಿ ಕಾರ್ಖಾನೆಗಳಲ್ಲಿ ಜುಲೈನಿಂದಲೇ ಕಬ್ಬು ನುರಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಕಳೆದ ಬಾರಿಯ ಕಬ್ಬು ಕಟಾವು, ಸಾಗಾಣಿಕೆ ವೆಚ್ಚವನ್ನು ಕೂಲಢ ನೀಡಬೇಕು.
ಕಾರ್ಖಾನೆಗಳು ರೈತರ ಕಬ್ಬಿನ ಬಾಕಿಯನ್ನು ಬಡ್ಡಿ ಸಮೇತ ಪಾವತಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರ ನಿಗದಿಪಡಿಸಿದ ದರವನ್ನು ಸಕಾಲದಲ್ಲಿ ಪಾವತಿಸಬೇಕು.
ರಾಜ್ಯದ ಏಕಮಾತ್ರ ಸರಕಾರಿ ಸಕ್ಕರೆ ಕಾರ್ಖಾನೆ(ಮೈಶುಗರ್)ಯನ್ನು ಸರಕಾರಿ ಸ್ವಾಮ್ಯದಲ್ಲೇ ನಿರ್ವಹಿಸಬೇಕು. ಆನ್‍ಲೈನ್ ಮೂಲಕ ಶೇರುದಾರರ ಸಭೆ ನಿರ್ಧಾರ ಕೈಬಿಡಬೇಕು.
ಕಾರ್ಖಾನೆ ಚಾಲನೆಗೆ ಅಗತ್ಯವಿರುವ ಹಣಕಾಸು ಮತ್ತು ಸಿಬ್ಬಂದಿಯನ್ನು ಸರಕಾರ ಕೂಡಲೇ ಒದಗಿಸಬೇಕು. ಕಾರ್ಖಾನೆಯಲ್ಲಿನ ಇದುವರೆಗಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ಸುಸ್ಥಿತಿಯಲ್ಲಿರುವ ಕಾರ್ಖಾನೆಯ ಒಂದು ಮಿಲ್ಲನ್ನು ತಕ್ಷಣವೇ ಆರಂಭಿಸಿ ಕಬ್ಬು ಅರೆಯಬೇಕು. ಪರ್ಯಾಯ ಆಧುನಿಕ ಕಾರ್ಖಾನೆ ಸ್ಥಾಪಿಸಲು ಸರಕಾರ ಅಗತ್ಯಕ್ರಮವಹಿಸಬೇಕು.
ಪಿಎಸ್‍ಎಸ್‍ಕೆಯನ್ನು 40 ವರ್ಷ ಖಾಸಗಿಗೆ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಿ ಸರಕಾರ ಅನುದಾನ ನೀಡಿ ಸಹಕಾರಿ ಕಾರ್ಖಾನೆ ಸುಸ್ಥಿತರಕ್ಕೆ ಕ್ರಮಕೈಗೊಳ್ಳಬೇಕು.







