ಹಝಾರೆ, ದುಲೀಪ್, ದೇವಧರ ಟ್ರೋಫಿ ಟೂರ್ನಿ ರದ್ದುಗೊಳಿಸಲು ಜಾಫರ್ ಆಗ್ರಹ
ಹೊಸದಿಲ್ಲಿ, ಜೂ.15: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವುದು ಇನ್ನೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ವಿಜಯ್ ಹಝಾರೆ, ದುಲೀಪ್ ಮತ್ತು ದೇವಧರ್ ಟ್ರೋಫಿಯನ್ನು ರದ್ದುಗೊಳಿಸಬೇಕು ಎಂದು ಭಾರತದ ಮಾಜಿ ಟೆಸ್ಟ್ ಆರಂಭಿಕ ಬ್ಯಾಟ್ಸ್‌ಮನ್ ವಸೀಂ ಜಾಫರ್ ಆಗ್ರಹಿಸಿದ್ದಾರೆ.
ಇದರ ಬದಲಾಗಿ ಪೂರ್ಣ ಪ್ರಮಾಣದ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯನ್ನು ಆಯೋಜಿಸಬೇಕು ಎಂದು ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ದೇಶೀಯ ಕ್ರಿಕೆಟ್ ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ದೇಶದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ವೇಗವಾಗಿ ಏರುತ್ತಿರುವುದರಿಂದ, ಬಿಸಿಸಿಐ ಇದುವರೆಗೆ ಕ್ರಿಕೆಟಿಂಗ್ ಚಟುವಟಿಕೆಗಳ ಪುನರಾರಂಭದ ಬಗ್ಗೆ ಕಾಯುವಿಕೆ ಮತ್ತು ವೀಕ್ಷಣೆ ನೀತಿಯನ್ನು ಅಳವಡಿಸಿಕೊಂಡಿದೆ.
ಕ್ರಿಕೆಟ್ ಆರಂಭಗೊಂಡರೆ ಮೊದಲು ಐಪಿಎಲ್‌ನ್ನು ನಡೆಸುವುದು ಮೊದಲ ಆದ್ಯತೆಯಾಗಿದೆ. ಐಪಿಎಲ್‌ನ್ನು ಮೊದಲ ಟೂರ್ನಿಯಾಗಿ ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಬಹುದು ಎಂದು ಜಾಫರ್ ಹೇಳಿದರು.
ಐಪಿಎಲ್‌ನ್ನು ಸೆಪ್ಟಂಬರ್-ಅಕ್ಟೋಬರ್ ನಲ್ಲಿ ನಡೆಸಲು ಬಿಸಿಸಿಐ ನೋಡುತ್ತಿದೆ. ಆದರೆ ಅದು ಏಶ್ಯ ಕಪ್ ಮತ್ತು ಟ್ವೆಂಟಿ-20 ವಿಶ್ವಕಪ್ ಭವಿಷ್ಯವನ್ನು ಅವಲಂಬಿಸಿರುತ್ತದೆ. ಅದು ಒಂದೇ ಸಮಯದಲ್ಲಿ ನಿಗದಿಯಾಗಿದೆ.
ಐಪಿಎಲ್ ಮುಗಿದ ನಂತರ, ಬಿಸಿಸಿಐ ದೇಶೀಯ ಋತುವನ್ನು ಇರಾನಿ ಟ್ರೋಫಿಯೊಂದಿಗೆ ಪ್ರಾರಂಭಿಸಲು ನೋಡಬಹುದು, ಏಕೆಂದರೆ ಸೌರಾಷ್ಟ್ರ ಮೊದಲ ಬಾರಿಗೆ ಚಾಂಪಿಯನ್ ಆಗಿರುವುದರಿಂದ ಆಡಲು ಅರ್ಹತೆ ಪಡೆದಿದೆ.
ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಹಾದಿಯನ್ನು ಕಠಿಣಗೊಳಿಸುವ ಅಗತ್ಯತೆಯ ಬಗ್ಗೆ ಜಾಫರ್ ಒತ್ತಿ ಹೇಳಿದರು.







