ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಉದ್ಯೋಗ ಸೃಷ್ಟಿ: ಕಂದಾಯ ಸಚಿವ ಅಶೋಕ್

ಬೆಂಗಳೂರು, ಜೂ.16: ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲವಾಗುವುದಲ್ಲದೆ, ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗಲಿದೆ. ಅಲ್ಲದೆ, ಕಾಯ್ದೆ ತಿದ್ದುಪಡಿಯಿಂದ ಭೂ ಪರಿವರ್ತನೆ ಸರಳೀಕೃತಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಕಾಸಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಯ್ದೆಯ ಹಳೆಯ ನಿಯಮದಂತೆ ಒಂದು ಕೈಗಾರಿಕೆ ಸ್ಥಾಪಿಸಲು ಅರ್ಜಿ ಸಲ್ಲಿಸಿದರೆ ಆರೇಳು ವರ್ಷ ಕಾಯಬೇಕಿತ್ತು. ತಿದ್ದುಪಡಿಯಿಂದು ಕೇವಲ ಮೂವತ್ತು ದಿನಗಳಲ್ಲಿ ಭೂ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.
ಇಪ್ಪತ್ತು ವರ್ಷಗಳ ಹಿಂದೆಯೇ ಕಾಯ್ದೆಗೆ ತಿದ್ದುಪಡಿ ಮಾಡಿದ್ದರೆ ರಾಜ್ಯದಲ್ಲಿ ಕೈಗಾರಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿರುತ್ತಿತ್ತು. ರಾಜ್ಯದಲ್ಲಿ ಬರಡಾಗಿರುವ ಭೂಮಿ ಸಾಕಷ್ಟಿದ್ದು, ಆ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ಅವಕಾಶ ನೀಡಿದರೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಹೇಳಿದರು.
ನಿರುಪಯುಕ್ತ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಇಂತಹ ಭೂಮಿಯಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದೆ ಚಿಂತೆಯಲ್ಲಿರುವ ರೈತರಿಗೆ ಸರಕಾರದ ತಿದ್ದುಪಡಿಯಿಂದ ಅನುಕೂಲವಾಗಲಿದೆ. ಇನ್ನೂ ಹತ್ತು ದಿನಗಳಲ್ಲಿ ಕಾಯ್ದೆ ತಿದ್ದುಪಡಿ ಆದೇಶ ಹೊರಬರಲಿದೆ ಎಂದು ಅಶೋಕ್ ಹೇಳಿದರು.
ರಾಜ್ಯ ಸರಕಾರ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗದು, ಭೂಮಿ ಉಳ್ಳವರ ಪಾಲಾಗಲಿದೆ ಎಂಬ ಕೆಲವರ ಆತಂಕವಿದೆ. ಆದರೆ, ಅವರಿಗೆ ಈ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡಲಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಅನುಕೂಲ ಕಲ್ಪಿಸುವ ದೃಷ್ಟಿಯಿಂದಲೇ ಕಾಯ್ದೆಗೆ ತಿದ್ದುಪಡಿಗೆ ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.







