ಡಿ.31ರವರೆಗೆ ಪಹಣಿ ತಿದ್ದುಪಡಿ ಅಧಿಕಾರ ತಹಶೀಲ್ದಾರ್ ಹೆಗಲಿಗೆ: ರಾಜ್ಯ ಸರಕಾರದ ಆದೇಶ

ಬೆಂಗಳೂರು, ಜೂ.16: ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ಎಲ್ಲ ತಾಲೂಕುಗಳ ಗ್ರಾಮಲೆಕ್ಕಾಧಿಕಾರಿಗಳ ವೃತ್ತ ಮಟ್ಟದಲ್ಲಿ ಕಂದಾಯ ಅದಾಲತ್‍ಗಳನ್ನು ನಡೆಸಿ ಪಹಣಿಗಳ ಲೋಪದೋಷಗಳನ್ನು ಸರಿಪಡಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಈ ಹಿಂದಿನಂತೆಯೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಡಿಸೆಂಬರ್ 31ರವರೆಗೆ ಕೆಲವು ಶರತ್ತುಗಳಿಗೊಳಪಟ್ಟು ಪ್ರತ್ಯಾಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
ಶರತ್ತುಗಳು: ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದುದರಿಂದ, ಅರ್ಜಿಗಳನ್ನು ವಿಲೇವಾರಿ ಮಾಡಲು ಆಯಾ ಕಚೇರಿಯ ಸಿಬ್ಬಂದಿಗಳನ್ನು ನಿಯೋಜಿಸಬೇಕು.
ಬಾಕಿ ಇರುವ ಹಾಗೂ ಸ್ವೀಕೃತವಾಗುವ ಅರ್ಜಿಗಳನ್ನು ಡಿ.31ರ ಅಂತ್ಯಕ್ಕೆ ತಿದ್ದುಪಡಿ ಮಾಡಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ, ಕಂದಾಯ ಅದಾಲತ್ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಜಿಲ್ಲಾಧಿಕಾರಿಗಳು ತಪ್ಪದೆ ಪ್ರತಿವಾರ ಕಂದಾಯ ಅದಾಲತ್‍ಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನ ತಹಶೀಲ್ದಾರರ ಪ್ರಗತಿ ಪರಿಶೀಲಿಸಿ, ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು.
ಸರಕಾರವು ನಾಗರಿಕರಿಗೆ ಉಂಟಾಗುವ ಅನಾನುಕೂಲವನ್ನು ಕಂದಾಯ ಅದಾಲತ್ ಮುಖಾಂತರ ತೊಡೆದು ಹಾಕುವುದಕ್ಕಾಗಿಯೆ ಸಹಾಯಕ ಆಯುಕ್ತರಿಗೆ ನೀಡಿರುವ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜನೆ ಮಾಡಿದೆ. ತಹಶೀಲ್ದಾರರು ಸಮರ್ಥವಾಗಿ ಮತ್ತು ಕಾನೂನು ಬದ್ಧವಾಗಿ ಈ ಅಧಿಕಾರವನ್ನು ಬಳಸಬೇಕು ಎಂದು ಸರಕಾರ ಸ್ಪಷ್ಟಪಡಿಸಿದೆ.
ಒಂದು ವೇಳೆ ತಹಶೀಲ್ದಾರರು ಮತ್ತು ಅಧೀನದ ಯಾವುದೇ ಸಿಬ್ಬಂದಿಯು ಪಹಣಿ ಪಹಣಿ ಸರಿಪಡಿಸುವ ಪ್ರಕ್ರಿಯೆಯಲ್ಲಿ ನಿಯಮ ಬಾಹಿರವಾದ ಮತ್ತು ಸರಕಾರಿ ನೌಕರರಿಗೆ ತಕ್ಕದಲ್ಲದ್ದ ಮಾರ್ಗವನ್ನು ಅನುಸರಿಸುವುದಾಗಲಿ ಅಥವಾ ಮ್ಯುಟೇಷನ್ ಪ್ರಕ್ರಿಯೆ ಇಲ್ಲದೆ ಸ್ವಾಧೀನತೆ ಬದಲಾಯಿಸುವುದಕ್ಕೆ ಅಥವಾ ತೆಗೆದುಹಾಕುವ ಕೆಲಸವನ್ನು ಮಾಡಬಾರದು. ಈ ಅವಧಿಯಲ್ಲಿ ಸರಕಾರಿ ಜಮೀನುಗಳ ಸಂರಕ್ಷಣೆ ತಹಶೀಲ್ದಾರರ ಜವಾಬ್ದಾರಿಯಾಗಿರುತ್ತದೆ ಎಂದು ಸರಕಾರ ಎಚ್ಚರಿಕೆ ನೀಡಿದೆ.
ಪುರಸಭೆ, ನಗರಸಭೆ, ನಗರ ಪಾಲಿಕೆ ವ್ಯಾಪ್ತಿಯಡಿ ಬರುವ ಪಹಣಿಗಳ ತಿದ್ದುಪಡಿಯನ್ನು ಮಾಡಲು ಈ ಆದೇಶದಡಿ ತಹಶೀಲ್ದಾರರಿಗೆ ಅವಕಾಶವಿಲ್ಲ. ಹಾಗೂ ಸರಕಾರಿ ಜಮೀನುಗಳಿಗೆ ಸಂಬಂಧಪಟ್ಟಂತೆ ಮ್ಯುಟೇಷನ್, ಕೈಬರಹ ಪಹಣಿ ಅಥವಾ ಮಂಜೂರಾಗಿದೆ ಎಂದು ಇತರೆ ದಾಖಲೆ ಆಧರಿಸಿ ಪಹಣಿ ಸೃಜಿಸಲು, ಇಂಡೀಕರಿಸಲು, ಕಾಲೋಚಿತಗೊಳಿಸಲು ಹಾಗೂ ಸರಕಾರಿ ಸರ್ವೆ ನಂಬರ್ ಗಳ ಪಹಣಿ ತಿದ್ದುಪಡಿ ಮಾಡಲು ಈ ಆದೇಶ ಅನ್ವಯಿಸುವುದಿಲ್ಲ.
ಕಂದಾಯ ಅದಾಲತ್‍ನಲ್ಲಿ ಪಹಣಿ ತಿದ್ದುಪಡಿ ಆದೇಶ ಹೊರಡಿಸಿರುವುದನ್ನು ಭೂಮಿ ತಂತ್ರಾಂಶದಲ್ಲಿ ಕಂದಾಯ ಅದಾಲತ್‍ನಲ್ಲಿ ಆಪ್ಷನ್ ಮೂಲಕ ತಿದ್ದುಪಡಿ ಆದೇಶವನ್ನು ಸ್ಕ್ಯಾನ್ ಮಾಡಿ ಕಾಲೋಚಿತಗೊಳಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಅಕ್ರಮಗಳು ಉಂಟಾದಲ್ಲಿ ತಹಶೀಲ್ದಾರರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸುವುದಲ್ಲದೆ, ಅಂತಹವರ ವಿರುದ್ಧ ಇಂಡಿಯನ್ ಪೀನಲ್ ಕೋಡ್ 1860ರ ಕಲಂ 409 ರೀತಿಯ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192-ಎ ರೀತಿಯ ಕ್ರಮ ಜರುಗಿಸಲಾಗುವುದು.
ಕಂದಾಯ ಅದಾಲತ್ ಯೋಜನೆಯ ಅನುಷ್ಠಾನದ ಮೇಲುಸ್ತುವಾರಿಕೆ ಜವಾಬ್ದಾರಿಯು ಭೂ ಮಾಪನ ಇಲಾಖೆಯ ಆಯುಕ್ತರು ಹಾಗೂ ಕಂದಾಯ ಇಲಾಖೆಯ ಭೂಮಿ ಮತ್ತು ಯುಪಿಓಆರ್ ವಿಭಾಗದ ಪದನಿಮಿತ್ತ ನಿರ್ದೇಶಕರದ್ದಾಗಿದೆ. ಅನುಷ್ಠಾನದ ಪ್ರಗತಿಯ ವರದಿಯನ್ನು ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಪರಿಶೀಲಿಸಬೇಕು ಹಾಗೂ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕು. ಇವರು ವರದಿಗಳನ್ನು ಪರಿಶೀಲಿಸಿ ಸರಕಾರಕ್ಕೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.







