ಅಕ್ರಮ ಮರಳುಗಾರಿಕೆ ಕಡಿವಾಣಕ್ಕೆ ಸ್ಯಾಂಡ್ ಬಝಾರ್ ಆ್ಯಪ್‌ಗೆ ಮರು ಚಾಲನೆ ನಿಡಬೇಕು : ಯು.ಟಿ.ಖಾದರ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯನ್ನು ಅಕ್ರಮ ಮರಳು ಗಾರಿಕೆಯ ಮೂಲಕ ಬಳ್ಳಾರಿ ಜಿಲ್ಲೆ ಯನ್ನು ಮಾಡಲು ಇಲ್ಲಿನ ಜಿಲ್ಲಾಡಳಿತ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಹೊರಟಂತಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಗಾರಿಕೆ ಕಡಿವಾಣ ಹಾಕಲು ತಕ್ಷಣ ಸ್ಯಾಂಡ್ ಬಝಾರ್ ಆ್ಯಪ್‌ಗೆ ಮರುಚಾಲನೆ ನಿಡಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಈ ರೀತಿಯ ಅಕ್ರಮ ಮರಳು ಗಾರಿಕೆಗೆ ಬೆಂಬಲ ನೀಡಬಾರದು. ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾಗೂ ಇತರ ಕ್ಷೇತ್ರದ ಮೇಲೆ ಆದಂತೆ ಅಕ್ರಮ ಮರಳು ಗಾರಿಕೆಯಿಂದ ಕೆಟ್ಟ ಪರಿಣಾಮ ಜಿಲ್ಲೆಯ ಜನತೆಯ ಮೇಲಾಗಬಹುದು ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಅಕ್ರಮ ಮರಳು ಗಾರಿಕೆಯಿಂದ ಈಗಾಗಲೇ ಒಂದು ಲೋಡ್ ಮರಳಿನ ದರ 8 ಸಾವಿರದಿಂದ 20 ಸಾವಿರಕ್ಕೆ ಏರಿಕೆಯಾಗಿದೆ. ಜೊತೆಗೆ ಅಕ್ರಮ ಮರಳು ಗಾರಿಕೆಯಿಂದ ಇಲ್ಲಿನ ಜನರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆ ಕಾರಣದಿಂದ ಜಿಲ್ಲಾಡಳಿತ ಈ ಅಕ್ರಮ ಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕಲು ಹಾಗೂ ಜರಿಗೆ ನಿಗದಿತ ದರದಲ್ಲಿ ಮನೆ ಕಟ್ಟಲು ಮರಳು ಒದಗಿಸಲು ಸ್ಯಾಂಡ್ ಆ್ಯಪ್‌ನ್ನು ರಚಿಸಿದ್ದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮರಳುಗಾರಿಕೆಗೆ ಅನುಮತಿ ಹೊಂದಿರುವವರಿಗೆ ಪರವಾನಿಗೆಯನ್ನು ನವೀಕರಣ ಮಾಡದೆ.ನಿಗದಿತ ಸ್ಥಳಗಳನ್ನು ಬಿಟ್ಟು ಎಲ್ಲೆಂದರಲ್ಲಿ ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡಿರುವುದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಅಕ್ರಮ ಮರಳು ಗಾರಿಕೆ ಕಂಡು ಬಂದರೆ ಕಾಂಗ್ರೆಸ್ ಅಧ್ಯಕ್ಷರ ಮೊಬೈಲ್ ದೂರವಾಣಿಗೆ ವ್ಯಾಟ್ಸ್‌ಪ್ ಮೂಲಕ 984549 1517 ಸಂಖ್ಯೆಗೆ ದೂರು ನೀಡಬಹುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಪ್ರಧಾನ ಕಾರ್ಯದರ್ಶಿ ಸಂತೊಷ್ ಶೆಟ್ಟಿ, ಸದಾಶಿವ ಉಳ್ಳಾಲ್ ಇತರ ಪದಾಧಿಕಾರಿಗಳಾದ ಶುಭೋಧಯ ಆಳ್ವಾ, ದಿನೇಶ್ ಕುಂಪಲ ಟಿ.ಕೆ. ಸುದೀರ್ ಮೊದಲಾದವರು ಉಪಸ್ಥಿತರಿದ್ದರು.







