ಬೀಜಿಂಗ್‌ನ ಕೊರೋನ ವೈರಸ್ ಪರಿಸ್ಥಿತಿ ‘ಅತ್ಯಂತ ಗಂಭೀರ’: ಚೀನಾದಲ್ಲಿ ಮತ್ತೆ ಆತಂಕ

ಬೀಜಿಂಗ್, ಜೂ. 16: ಚೀನಾ ರಾಜಧಾನಿಯಲ್ಲಿನ ಕೊರೋನ ವೈರಸ್ ಪರಿಸ್ಥಿತಿ ‘ಅತ್ಯಂತ ಗಂಭೀರ’ವಾಗಿದೆ ಎಂದು ಬೀಜಿಂಗ್ ನಗರದ ವಕ್ತಾರ ಕ್ಸು ಹೆಜಿಯನ್ ಮಂಗಳವಾರ ಹೇಳಿದ್ದಾರೆ.
ಬೀಜಿಂಗ್‌ನಲ್ಲಿ ಮಂಗಳವಾರ 27 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಕೊರೋನ ವೈರಸ್ ಸೋಂಕು ಪ್ರಕರಣಗಳ ಎರಡನೇ ಅಲೆಯ ಭೀತಿ ವ್ಯಕ್ತವಾಗಿದೆ.
ಮಾರಕ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವಲ್ಲಿ ಚೀನಾವು ಬಹುತೇಕ ಯಶಸ್ವಿಯಾಗಿತ್ತಾದರೂ, ಈಗ ಬೀಜಿಂಗ್‌ನ ಕ್ಸಿನ್‌ಫಡಿ ಸಗಟು ಆಹಾರ ಮಾರುಕಟ್ಟೆ ಹೊಸ ಕೊರೋನ ವೈರಸ್ ಸೋಂಕಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
ಹೊಸ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿ ಕಳೆದ ಐದು ದಿನಗಳಲ್ಲಿ ವರದಿಯಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 106ಕ್ಕೆ ಏರಿದೆ. ಈ ನಡುವೆ, ಅಧಿಕಾರಿಗಳು ನಗರದಲ್ಲಿನ ಸುಮಾರು 10 ಪ್ರದೇಶಗಳಿಗೆ ಬೀಗ ಹಾಕಿದ್ದಾರೆ ಹಾಗೂ ಸಾವಿರಾರು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ರಾಜಧಾನಿಯಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ತುಂಬಾ ಗಂಭೀರವಾಗಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಸು ಹೆಜಿಯನ್ ತಿಳಿಸಿದರು.
ಕಳವಳಕಾರಿ: ವಿಶ್ವ ಆರೋಗ್ಯ ಸಂಸ್ಥೆ
ಬೀಜಿಂಗ್‌ನ ಗಾತ್ರ ಮತ್ತು ಸಂಪರ್ಕವನ್ನು ಗಣನೆಗೆ ತೆಗೆದುಕೊಂಡರೆ, ಅಲ್ಲಿನ ನೂತನ ಕೊರೋನ ವೈರಸ್ ಪ್ರಕರಣಗಳು ಕಳವಳಕ್ಕೆ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
‘‘ಇಂಥ ಕೊರೋನ ವೈರಸ್ ಕೇಂದ್ರಗಳು ಕಳವಳಕಾರಿ ಹಾಗೂ ಅವುಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ ಹಾಗೂ ನಿಯಂತ್ರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚೀನೀ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ’’ ಎಂದು ಸಂಸ್ಥೆಯ ತುರ್ತು ಪರಿಸ್ಥಿತಿಗಳ ನಿರ್ದೇಶಕ ಮೈಕ್ ರಯಾನ್ ಹೇಳಿದರು.







