ಜೂ.17ರಿಂದ ಈದ್ಗಾ ಜುಮಾ ಮಸೀದಿಯಲ್ಲಿ ನಮಾಝ್ ಆರಂಭ
ಮಂಗಳೂರು, ಜೂ.16: ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಈದ್ಗಾ ಜುಮಾ ಮಸೀದಿಯಲ್ಲಿ ಜೂ.17ರಿಂದ ನಮಾಝ್ ಆರಂಭಗೊಳ್ಳಲಿದೆ ಎಂದು ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿಯ ಆಡಳಿತ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.
ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಕಾರವು ಎಲ್ಲಾ ಮಸೀದಿಗಳಲ್ಲಿ ನಮಾಝ್‌ಗೆ ನಿರ್ಬಂಧ ವಿಧಿಸಿತ್ತು. ಜೂ.8ರಿಂದ ನಮಾಝ್‌ಗೆ ಅವಕಾಶ ಕೊಟ್ಟರೂ ಕೂಡ ನಗರದ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತಿತರ ಕೆಲವು ಮಸೀದಿಗಳಲ್ಲಷ್ಟೇ ನಮಾಝ್ ಆರಂಭಿಸಲಾ ಗಿತ್ತು. ಇದೀಗ ಹಂತ ಹಂತವಾಗಿ ನಗರದ ಮಸೀದಿಗಳಲ್ಲಿ ನಮಾಝ್‌ಗೆ ಸಿದ್ಧತೆ ನಡೆಸಲಾಗುತ್ತಿದೆ.
ಜೂ.17ರಂದು ಈದ್ಗಾ ಜುಮಾ ಮಸೀದಿ ಮತ್ತು ಬಂದರ್ ಕಂದುಕದ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ನಮಾಝ್ ಆರಂಭವಾಗಲಿದೆ. ನಮಾಝ್ ಆಗುವ ಐದು ನಿಮಿಷಗಳ ಮೊದಲು ಮಸೀದಿಯ ಬಾಗಿಲುಗಳನ್ನು ತೆರೆಯಲಾಗುತ್ತದೆ.
ಈದ್ಗಾದಲ್ಲಿ ಶುಕ್ರವಾರದ ಜುಮಾಕ್ಕೆ 12:10ಕ್ಕೆ ಮಸೀದಿಯ ಗೇಟುಗಳನ್ನು ತೆರೆಯಲಾಗುವುದು. ಖುತ್ಬಾ 12:45ಕ್ಕೆ ಆರಂಭಗೊಳ್ಳಲಿದೆ. ಶುಕ್ರವಾರ ಜುಮಾ ನಮಝ್‌ಗೆ 400 ಮಂದಿಗಷ್ಟೆ ಅವಕಾಶ ಮಾಡಿಕೊಡಲಾಗುತ್ತದೆ. 60 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷದ ಕೆಳಗಿನ ಮಕ್ಕಳು ಹಾಗೂ ಕೆಮ್ಮು ನೆಗಡಿ ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಸೀದಿಗೆ ಬರಬಾರದು. ವಿದೇಶದಿಂದ ಅಥವಾ ಹೊರರಾಜ್ಯಗಳಿಂದ ಬಂದು ಹೋಂ ಕ್ವಾರೆಂಟೈನಿನಲ್ಲಿರುವವರು ಮತ್ತು ಅವರ ಕುಟುಂಬದ ಸದಸ್ಯರು ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮಸೀದಿಗೆ ಕಡ್ಡಾಯವಾಗಿ ಬರಬಾರದು.
ಇಮಾಮರು ನಮಾಝಿಗೆ ನಿಂತ ಕೂಡಲೇ ಮಸೀದಿಯ ಬಾಗಿಲನ್ನು ಮುಚ್ಚಲಾಗುವುದು. ನಮಾಝ್ ನಿರ್ವಹಿಸಿದ ಕೂಡಲೇ ಎಲ್ಲರೂ ಮಸೀದಿಯಿಂದ ಹೊರಗೆ ಹೋಗತಕ್ಕದ್ದು. ಮಸೀದಿಗೆ ಪ್ರವೇಶಿಸುವವರು ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.







