ಸಾಮಾಜಿಕ ಬದುಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಸಂತಸ ತಂದಿದೆ : ರಮನಾಥ ರೈ
ನರಿಕೊಂಬು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪರಿಶೀಲನೆ

ಬಂಟ್ವಾಳ, ಜೂ.16: ನರಿಕೊಂಬು ಗ್ರಾಮದಲ್ಲಿ 18.29 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿರುವ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಉಪಸ್ಥಿತಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಂಗಳವಾರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನರಿಕೊಂಬು, ಶಂಭೂರು, ಬಾಳ್ತಿಲ, ಗೋಳ್ತಮಜಲು ಹಾಗೂ ಅಮ್ಟೂರು ಗ್ರಾಮಗಳ 38 ಜನವಸತಿ ಕೇಂದ್ರಗಳಿಗೆ ಕುಡಿಯುವ ನೀರು ಒದಗಲಿದೆ. ಕಳೆದ ಕೆಲವು ಸಮಯಗಳಿಂದ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗಿದ್ದು, ಯೋಜನೆ ಫಲಪ್ರದವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಸಾಮಾಜಿಕ ಬದುಕಿನಲ್ಲಿ ಅತ್ಯಂತ ಹೆಚ್ಚು ಮನಸ್ಸಿಗೆ ಖುಷಿ ಕೊಟ್ಟ ಕಾರ್ಯಕ್ರಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಂದ ಅವರು, ಆರಂಭದಲ್ಲಿ ಈ ಬೃಹತ್ ಯೋಜನೆಯ ಬಗ್ಗೆ ನಮಗೂ ಅನೇಕ ಸಂದೇಹಗಳಿತ್ತು, ಆದರೆ ಎಲ್ಲಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮನಸ್ಸಿಗೆ ತೃಪ್ತಿತಂದಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿಗೆ ಮಾತ್ರ ಐದು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಯೋಜನೆ ಮಂಜೂರಾಗಿದ್ದು, 4 ಯೋಜನೆಗಳು ಪೂರ್ಣಪ್ರಮಾಣದಲ್ಲಿ ಜನತೆಯ ಉಪಯೋಗಕ್ಕೆ ಲಭ್ಯವಾಗಿರುವುದು ನನಗೆ ಅತೀವ ಸಂತಸ ತಂದಿದೆ.
ನನ್ನ ಅಧಿಕಾರವಧಿಯಲ್ಲಿ ಕಾರ್ಯಗಳನ್ನು ಯೋಜನೆಗಳನ್ನು ಕ್ಷೇತ್ರದಲ್ಲಿ ಮಂಜೂರು ಮಾಡಲು ಸಹಕರಿಸಿದಂತಹ ಹಿಂದಿನ ಸರಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿ ವರ್ಗಕ್ಕೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ 50 ವರ್ಷಗಳ ದೀರ್ಘಕಾಲಿಕ ದೂರದೃಷ್ಟಿ ಇರಿಸಿಕೊಂಡು ನಡೆಸಲಾಗಿದ್ದು, ಆಸುಪಾಸಿನ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲಿದೆ ಎಂದವರು ಹೇಳಿದರು.
ಬಂಟ್ವಾಳ ತಾಲೂಕಿನಲ್ಲಿ ಬಿಟ್ಟು ಹೋಗಿರುವ ಸಜೀಪಮುನ್ನೂರು ಗ್ರಾಮ ಪಂಚಾಯತ್ ಸಹಿತ ಆಸುಪಾಸಿನ ಐದು ಗ್ರಾಮಗಳನ್ನು ಉಳ್ಳಾಲ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ , ಮುಂದಿನ ಹಂತದಲ್ಲಿ ಇದು ಜಾರಿಯಾಗುವುದರಿಂದ ತಾಲೂಕಿನ ಎಲ್ಲಾ ಗ್ರಾಮಗಳೂ ಕುಡಿಯುವ ನೀರಿನ ಯೋಜನೆಗೆ ಒಳಪಡಲಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ, ಮಾಣಿ ಗ್ರಾ.ಪಂ.ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪ್ರಕಾಶ ಕಾರಂತ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಪೂಜಾರಿ, ಉಮೇಶ್ , ಅಲ್ಬರ್ಟ್, ಉಮೇಶ್ ನೆಲ್ಲಿಗುಡ್ಡೆ, ಮಾಧವ ಕರ್ಬೆಟ್ಟು, ಅಧಿಕಾರಿಗಳಾದ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.






.jpeg)

.jpeg)

.jpeg)


