ಕೊರೋನ ಹರಡುವಿಕೆ ಬಗ್ಗೆ ನಿರ್ಲಕ್ಷ್ಯ: ರಾಜಕಾರಣಿಗಳು, ನಟರ ವಿರುದ್ಧ ಹೈಕೋರ್ಟ್ ಗೆ ಮೆಮೊ ಸಲ್ಲಿಕೆ

ಬೆಂಗಳೂರು, ಜೂ.16: ಕೊರೋನ ವೈರಸ್ ಸೋಂಕು ಹರಡುವಿಕೆ ಬಗ್ಗೆ ರಾಜಕಾರಣಿಗಳು ಹಾಗೂ ನಟರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲೆ ಗೀತಾ ಮಿಶ್ರಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಎ.ಆರ್.ವಿಶ್ವನಾಥ್ ವಿರುದ್ಧ ಗೀತಾ ಮಿಶ್ರಾ ಅರ್ಜಿ ಸಲ್ಲಿಸಿದ್ದರು. ಈಗ ಅದೇ ಪ್ರಕರಣದಲ್ಲಿ ವಕೀಲ ಜಿ.ಆರ್.ಮೋಹನ್ ಮೆಮೊ ಸಲ್ಲಿಕೆ ಮಾಡಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಪಿ.ಟಿ.ಪರಮೇಶ್ವರ್ ನಾಯಕ್, ನಟ ರಾಘವೇಂದ್ರ ರಾಜಕುಮಾರ್ ವಿರುದ್ಧ ಮೆಮೊ ಸಲ್ಲಿಕೆಯಾಗಿದೆ.
ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಗಳ ಮದುವೆ ನಿಶ್ಚಯ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಯಾವುದೇ ಸುರಕ್ಷಿತ ಅಂತರ ಕಾಯ್ದುಕೊಂಡಿಲ್ಲ. ನಟ ರಾಘವೇಂದ್ರ ರಾಜ್‍ಕುಮಾರ್, ಸರ್ಜಾ ಕುಟುಂಬದವರಿಗೆ ಸಾಂತ್ವನ ಹೇಳಲು ಬಂದಿದ್ದು, ಈ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಹೈಕೋರ್ಟ್‍ನಲ್ಲಿ ದೂರು ಸಲ್ಲಿಸಲಾಗಿದೆ.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ತಮ್ಮ ಮಗನ ಮದುವೆ ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಚಳ್ಳಕೆರೆಯ ಪರುಶುರಾಂಪುರದಲ್ಲಿ ನಡೆದಿದ್ದ ಮೆರವಣಿಗೆ ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನ ಮೆಮೋ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಅರ್ಜಿ ವಿಚಾರಣೆಗೆ ಬರಲಿದೆ.







