ಯುಎಸ್ ಓಪನ್ ಆಯೋಜಿಸಲು ಇನ್ನೂ ದೊರೆಯದ ಸರಕಾರದ ಅಂಕಿತ
ನ್ಯೂಯಾರ್ಕ್, ಜೂ.16: ಯುಎಸ್ ಓಪನ್ ಟೆನಿಸ್ ಆಯೋಜಿಸಲು ಅಲ್ಲಿನ ಸರಕಾರದ ಅನುಮತಿಗಾಗಿ ಸಂಘಟಕರು ಕಾಯುತ್ತಿದ್ದಾರೆ.
ಯುಎಸ್ ಓಪನ್ 2020ರ ಆವೃತ್ತಿಯನ್ನು ಪ್ರೇಕ್ಷಕರು ಇಲ್ಲದೆ ನಡೆಸಲು ಯುಎಸ್ ಟೆನಿಸ್ ಅಸೋಸಿಯೇಶನ್ ಇನ್ನೂ ನ್ಯೂಯಾರ್ಕ್ ರಾಜ್ಯ ಸರಕಾರದಿಂದ ಗ್ರೀನ್ ಸಿಗ್ನಲ್ ಪಡೆದಿಲ್ಲ.
ಕೊರೋನ ವೈರಸ್ ಕಾರಣದಿಂದಾಗಿ ಟೆನಿಸ್ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ಮೊದಲ ಗ್ರಾನ್ ಸ್ಲಾಮ್ ಟೂರ್ನಿಯನ್ನು ನಡೆಸಲು ಯುಎಸ್ ಟೆನಿಸ್ ಅಸೋಸಿ ಯೇಶನ್ ತಯಾರಿ ನಡೆಸುತ್ತಿದೆ.
‘‘ನಮಗೆ ಅಗತ್ಯದ ಅನುಮೋದನೆ ದೊರೆತರೆ ನಾವು ಮುಂದುವರಿಯಲು ಸಿದ್ಧರಿದ್ದೇವೆ ಎಂದು ಯುಎಸ್‌ಟಿಎ ವಕ್ತಾರ ಕ್ರಿಸ್ ವಿಡ್ಮೇಯರ್ ಸೋಮವಾರ ದೂರವಾಣಿ ಸಂದರ್ಶನದಲ್ಲಿ ಹೇಳಿದರು.
‘‘ನಾವು ಪ್ರಸ್ತಾಪವನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರ ವಕ್ತಾರ ರಿಚರ್ಡ್ ಅಜ್ಜೋಪಾರ್ಡಿ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಅನೇಕ ಕ್ರೀಡೆಗಳಂತೆ, ಕೋವಿಡ್ ಕಾರಣದಿಂದಾಗಿ ವೃತ್ತಿಪರ ಟೆನಿಸ್ ಟೂರ್ನಿಗಳನ್ನು ಮಾರ್ಚ್‌ನಿಂದ ಸ್ಥಗಿತಗೊಳಿಸಲಾಗಿದೆ. ಫ್ರೆಂಚ್ ಓಪನ್‌ನ್ನು ಮೇ ತಿಂಗಳಿನಿಂದ ಮುಂದೂಡಲಾಯಿತು. ಯುಎಸ್ ಓಪನ್ ಸೆಪ್ಟಂಬರ್ನಲ್ಲಿ ನಿಗದಿಯಾಗಿದೆ. 1945 ರಲ್ಲಿ 2ನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ವಿಂಬಲ್ಡನ್ ರದ್ದುಗೊಂಡಿತು.







