ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಎಸ್‍ಯುಸಿಐ ಪ್ರತಿಭಟನೆ

ಬೆಂಗಳೂರು, ಜೂ, 16: ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ಬಡ-ಮಧ್ಯಮ ವರ್ಗದ ರೈತರ ಜಮೀನನ್ನು ಕಾರ್ಪೋರೇಟ್ ಹಿಡಿತಕ್ಕೆ ಒಪ್ಪಿಸಲು ಹೊರಟಿದ್ದು, ಕೂಡಲೇ ಈ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಎಸ್‍ಯುಸಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮಲ್ಲೇಶ್ವರಂ ವೃತ್ತದಲ್ಲಿನ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಎಸ್‍ಯುಸಿಐ ಪಕ್ಷ ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‍ಕೆಎಸ್) ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಈ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಸದಸ್ಯರಾದ ಕೃಷ್ಣ, ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತತ್ತರಿಸುತ್ತಿರುವಾಗ, ಅವರ ನೆರವಿಗೆ ಬರಬೇಕಾದ ಸರಕಾರ, ರೈತರ ಭೂಮಿಯನ್ನೇ ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಠಿಗೆ ಹಾಕುವಂತಹ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ದೂರಿದರು.
ಇಂದು ರೈತರ ಜೀವನ ಬಹಳ ಸಂಕಷ್ಟಕ್ಕೆ ಸಿಲುಕಿದೆ. ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರ ಇವರ ಕೈ ಹಿಡಿಯುವ ಬದಲು, ಕೃಷಿಯೇತರ ಆದಾಯದಿಂದ ಕೃಷಿ ಭೂಮಿಯನ್ನು ಕೊಳ್ಳಲು ನಿರ್ಬಂಧ ಹೇರಿದ ಆಂಶಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಕಂಪೆನಿಗಳಿಂದ ಹಿಡಿದು ಯಾರು ಬೇಕಾದರೂ ಭೂಮಿಯನ್ನು ಕೊಳ್ಳಲು ಮುಕ್ತ ಪರವಾನಿಗೆ ನೀಡಿ ಈ ತಿದ್ದುಪಡಿ ರೈತರ ಹಿತಕ್ಕಾಗಿ ಎಂದು ಘೋಷಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆ ಎಚ್.ಪಿ.ಶಿವಪ್ರಕಾಶ್ ಮಾತನಾಡಿ, ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯನ್ನು ತಂದಿದೆ. ಈ ಮೂಲಕ ಈ ಕಾಯ್ದೆಯ ಮೂಲ ಉದ್ದೇಶಕ್ಕೆ ದಕ್ಕೆ ತಂದಂತಾಗಿದೆ. ಯಾವ ಕಾಯ್ದೆ ರೈತರ ಹಿತಾಸಕ್ತಿಯನ್ನು ಕಾಪಾಡಬೇಕಿತ್ತೋ ಅದು ಇಂದು ಖಾಸಗಿ ಬಂಡವಾಳಗಾರರಿಗೆ ಅಪಾರ ಲಾಭ ತರುವಂತೆ ತಿರುಚಲಾಗಿದೆ. ಕರೋನ ಸೋಂಕಿನಿಂದಾಗಿ ಇಂದು ಜನತೆ ಪ್ರತಿಭಟಿಸಲು ರಸ್ತೆಗೆ ಇಳಿಯುವುದು ದುಸ್ತರವಾಗಿದೆ. ಈ ಪರಿಸ್ಥಿತಿ ಲಾಭ ಪಡೆದು ಸರಕಾರ ಒಂದರ ಮೇಲೊಂದರಂತೆ ಜನವಿರೋಧಿ ನೀತಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಖಂಡನೀಯ ಎಂದರು.
ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಎಸ್‍ಯುಸಿಐ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ರಾಜ್ಯ ಸರಕಾರಕ್ಕೆ ಇದೇ ವೇಳೆ ಎಚ್ಚರಿಕೆ ನೀಡಿದರು.








