ಹಳೆಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಗೊಣಗಾಟ ಹೆಚ್ಚು: ಶಿವಸೇನೆ
ಮುಂಬೈ, ಜೂ.16: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ಷೇಪವನ್ನು ನಿರಾಕರಿಸಿರುವ ಶಿವಸೇನೆ, ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಗೊಣಗಾಟ ಅಧಿಕ ಎಂದು ಹೇಳಿದೆ.
ವಿಭಿನ್ನ ಸಿದ್ಧಾಂತದ ಪಕ್ಷಗಳ ಮೈತ್ರಿಕೂಟದಲ್ಲಿ ಅಸಮಾಧಾನ ಸರ್ವೇಸಾಮಾನ್ಯವಾಗಿದೆ. ಆದರೆ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಸರಕಾರ ಪತನವಾಗಿ, ಮತ್ತೆ ರಾಜಭವನದ ಗೇಟು ಮುಂಜಾನೆಯೇ ತೆರೆಯುತ್ತದೆ ಎಂಬ ನಿರೀಕ್ಷೆ ಬೇಡ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಲೇಖನದಲ್ಲಿ ಹೇಳಲಾಗಿದೆ.
ಕಳೆದ ವರ್ಷ ರಾಜಭವನದಲ್ಲಿ ಬೆಳ್ಳಂಬೆಳಿಗ್ಗೆ ತರಾತುರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂದರ್ಭವನ್ನು ಶಿವಸೇನೆ ಪರೋಕ್ಷವಾಗಿ ಉಲ್ಲೇಖಿಸಿದೆ.
ಮೈತ್ರಿಕೂಟದ ಮೂರನೇ ಸ್ಥಂಭವಾಗಿರುವ ಕಾಂಗ್ರೆಸ್ ಐತಿಹಾಸಿಕ ಪರಂಪರೆ ಹೊಂದಿರುವ ಪಕ್ಷವಾಗಿದೆ. ಪಕ್ಷವನ್ನು ಬದಲಿಸಬಹುದಾದ ಹಲವರು ಕಾಂಗ್ರೆಸ್‌ನಲ್ಲಿದ್ದಾರೆ. ಈಗ ಕೇಳಿಬರುತ್ತಿರುವ ಗೊಣಗಾಟಕ್ಕೂ ಇದುವೇ ಕಾರಣವಾಗಿದೆ. ಮೈತ್ರಿಕೂಟದಲ್ಲಿ ಇಂತಹ ಗೊಣಗಾಟವನ್ನು ಸಹಿಸಿಕೊಳ್ಳಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಿದ್ಧರಾಗಿರಬೇಕು ಎಂದು ಲೇಖನದಲ್ಲಿ ಹೇಳಲಾಗಿದೆ.
ರಾಜ್ಯಪಾಲರ ಕೋಟಾದಡಿ ಇರುವ 12 ವಿಧಾನಪರಿಷತ್ ಸ್ಥಾನಗಳನ್ನು ಮೂರೂ ಪಕ್ಷಗಳು ವಿಧಾನಸಭೆಯಲ್ಲಿ ಹೊಂದಿರುವ ಬಲಕ್ಕೆ ಅನುಗುಣವಾಗಿ ಭರ್ತಿ ಮಾಡಿಕೊಳ್ಳಬೇಕು. ಈ ಹಿಂದೆ ಅಧಿಕಾರ ಹಂಚಿಕೆಯ ಸಂದರ್ಭ ಶಿವಸೇನೆ ಹೆಚ್ಚಿನ ತ್ಯಾಗ ಮಾಡಿದೆ ಎಂದು ಶಿವಸೇನೆ ಹೇಳಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 56, ಎನ್‌ಸಿಪಿ 54 ಮತ್ತು ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ.