ಲಾಕ್‍ಡೌನ್ ಸಡಿಲಿಕೆಯಾದರೂ ಬೀದಿ ಬದಿ ವ್ಯಾಪಾರಿಗಳ ಬದುಕು ದುಸ್ತರ
ಬೆಂಗಳೂರು, ಜೂ.16: ನಗರದಲ್ಲಿ ಲಾಕ್‍ಡೌನ್ ಬಳಿಕ ಸರಕಾರದ ಅನುಮತಿಯ ಹಿನ್ನೆಲೆಯಲ್ಲಿ ಪ್ರಾರಂಭವಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ನಿರೀಕ್ಷೆ ಹುಸಿಯಾಗಿದ್ದು, ವ್ಯಾಪಾರವಿಲ್ಲದೇ ಪರಿತಪಿಸುವಂತಾಗಿದೆ. ದಿನವಿಡೀ ಅಂಗಡಿ ತೆರೆದರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಬೀದಿಬದಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಬಟ್ಟೆ, ಚಪ್ಪಲಿ, ಬ್ಯಾಗ್, ಗೃಹೋಪಯೋಗಿ ವಸ್ತುಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಆಗುವಷ್ಟೂ ವ್ಯಾಪಾರ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಸಿಲಿಕಾನ್ ಸಿಟಿಯ ಪ್ರಮುಖ ಬೀದಿಗಳಾದ ಅವೆನ್ಯೂರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಮಲ್ಲೇಶ್ವರಂ, ಮೆಜೆಸ್ಟಿಕ್, ಜಯನಗರ ಸೇರಿದಂತೆ ಹಲವು ಕಡೆಗಳಲ್ಲಿ ನಿತ್ಯ ಬಿಕರಿ ವಸ್ತುಗಳನ್ನು ಹರಡಿಕೊಂಡು ಮಾರಾಟಕ್ಕೆ ಅಣಿಯಾಗುತ್ತಾರೆ. ಸಂಜೆವರೆಗೂ ಬಿಸಿಲಿನಲ್ಲೇ ಅಂಗಡಿ ತೆರೆದು ನಿಂತಿರುತ್ತಾರೆ. ಆದರೆ, ಆ ಕಡೆ ಯಾರೂ ತಲೆ ಹಾಕುತ್ತಿಲ್ಲ.
ದಿನಪೂರ್ತಿ ಮಳೆ, ಗಾಳಿ, ಬಿಸಿಲು ಎನ್ನದೇ ದಿನಪೂರ್ತಿ ಗ್ರಾಹಕರಿಗಾಗಿ ಕಾಯುತ್ತೇವೆ. ಆದರೆ, ಗ್ರಾಹಕರು ಬೀದಿಯಲ್ಲಿ ಸಂಚರಿಸುತ್ತಿದ್ದಾರೆ ಹೊರತು ಯಾರೂ ಕೊಳ್ಳಲು ಮುಂದಾಗುತ್ತಿಲ್ಲ. ಮೊದಲು ವಸ್ತುಗಳ ಬಗ್ಗೆ, ಬೆಲೆ ಬಗ್ಗೆ ವಿಚಾರಿಸುತ್ತಿದ್ದರು. ಈಗ ಅಂಗಡಿಗಳ ಬಳಿ ಸುಳಿಯುತ್ತಿಲ್ಲ. 15 ದಿನಗಳಿಂದ ಕಾಯುವುದೇ ಕೆಲಸವಾಗಿದೆ ಎಂದು ಮೆಜೆಸ್ಟಿಕ್ ಬಳಿ ಬಟ್ಟೆ ಮಾರಾಟ ಮಾಡುವ ನಿರಂಜನ್ ನೊಂದು ನುಡಿದರು.
ಬೀದಿಬದಿ ವ್ಯಾಪಾರಿಗಳಿಗೆ ದಿನದ ಆದಾಯವೇ ಆಧಾರ. ವ್ಯಾಪಾರ ಮಾಡಿದರಷ್ಟೇ ಮೂರು ಹೊತ್ತಿನ ಊಟ. ಈಗಿನ ಪರಿಸ್ಥಿತಿಯಲ್ಲಿ ಅಂಗಡಿಗೆ ಒಬ್ಬರು ಗ್ರಾಹಕರು ಬಂದರೂ ಸಾಕು ಎನ್ನುವಂತಾಗಿದೆ. ಕೊರೋನ ಸೋಂಕು ಭೀತಿಯಿಂದ ಜನರು ಖರೀದಿಯಿಂದ ದೂರವೇ ಉಳಿದಿದ್ದಾರೆ. ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಮತ್ತೊಬ್ಬ ವ್ಯಾಪಾರಿ ಸುರೇಶ್ ನಿಡಕಲ್ ಅಳಲು ತೋಡಿಕೊಂಡರು.
ಕೊರೋನ ಸೋಂಕು ಹರಡುವುದಕ್ಕಿಂತ ಮೊದಲು ದಿನಕ್ಕೆ ಕನಿಷ್ಟ ಎಂದರೂ ಎಲ್ಲ ಖರ್ಚು ಕಳೆದು 600-700 ಸಂಪಾದನೆ ಮಾಡುತ್ತಿದ್ದೆವು. ಆದರೆ, ಇವಾಗ ದಿನಪೂರ್ತಿ ವ್ಯಾಪಾರ ಮಾಡಿದರೂ 100 ರೂ. ಉಳಿಯುವುದು ಗ್ಯಾರಂಟಿ ಇಲ್ಲದಂತಾಗಿದೆ ಎಂದು ಬಟ್ಟೆ, ಪಾನಿಪುರಿ, ಚಪ್ಪಲಿ ವ್ಯಾಪಾರಿ ಹೀಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ 24,650 ಅಧಿಕೃತ ಬೀದಿಬದಿ ಅಂಗಡಿಗಳಿದ್ದು, ಅಂದಾಜು 80 ಸಾವಿರ ವ್ಯಾಪಾರದಲ್ಲಿ ತೊಡಗಿರುವ ಕೆಲಸಗಾರರು ಹಾಗೂ ವ್ಯಾಪಾರಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಿಬಿಎಂಪಿ ಹಾಗೂ ಸರಕಾರದ ಮಾರ್ಗಸೂಚಿಯಲ್ಲಿ ಬೀದಿಬದಿ ಆಹಾರ ಮಾರಾಟ ಮಾಡುವವರು ಕೇವಲ ಪಾರ್ಸೆಲ್‍ಗೆ ಅವಕಾಶ ನೀಡಲಾಗಿದೆ. ಆದರೆ, ಬೆರಳೆಣಿಕೆಯಷ್ಟು ಗ್ರಾಹಕರು ಆಹಾರ ಕೊಂಡೊಯ್ಯಲು ಬರುತ್ತಾರೆ. ಇವರ ಜತೆಗೆ ಆರೋಗ್ಯಾಧಿಕಾರಿಗಳು ಬೀದಿ ಬದಿ ವ್ಯಾಪಾರಕ್ಕೆ ಕೆಲವೆಡೆ ಅವಕಾಶ ನೀಡುತ್ತಿಲ್ಲ ಎಂದು ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಸಂಘದ ಅಧ್ಯಕ್ಷ ಸಿ.ರಂಗಸ್ವಾಮಿ ಹೇಳಿದ್ದಾರೆ.







