ದಿಲ್ಲಿ : ಕೋವಿಡ್ ಜವಾಬ್ದಾರಿ ಹೊತ್ತ ಎಸಿಪಿ ಪತಿ ಕೋವಿಡ್‌ಗೆ ಬಲಿ

ಹೊಸದಿಲ್ಲಿ : ಲಾಕ್‌ಡೌನ್ ಆರಂಭವಾದಾಗಿನಿಂದ ಪತಿ ಹೊರಗೆ ಬಂದಿರಲೇ ಇಲ್ಲ. ಆಧರೆ ನಾನು ದಿನ ಉದ್ಯೋಗಕ್ಕೆ ಹೋಗುತ್ತಿದ್ದೆ... ನನ್ನನ್ನು ಕ್ಷಮಿಸಿಕೊಳ್ಳಲು ಸಾಧ್ಯವೇ ಇಲ್ಲ- ಇದು ದೆಹಲಿ ಎಸಿಪಿ ಸುರೇಂದ್ರ ಜೀತ್ ಕೌರ್ ಅವರ ಆಕ್ರಂದನ. ದೆಹಲಿ ಆಸ್ಪತ್ರೆಯಲ್ಲಿ ಪತಿ ಚರಣ್‌ಜೀತ್ ಸಿಂಗ್ (54) ಕೋವಿಡ್‌ಗೆ ಬಲಿಯಾದ ಬಳಿಕ ಮಂಗಳವಾರ ಎಸಿಪಿ ದುಃಖಿಸಿದ್ದು ಹೀಗೆ..
ಲಜಪತ್‌ನಗರ ನಿವಾಸಿಯಾಗಿದ್ದ ಸಿಂಗ್ ಉದ್ಯಮಿ. ಪತ್ನಿ ಹಾಗೂ ಕೆನಡಾ ವಾಸಿ 26 ವರ್ಷದ ಮಗನನ್ನು ಅವರು ಅಗಲಿದ್ದಾರೆ.
ಕೌರ್ (57) ಅವರು ದೆಹಲಿಯ ಆಗ್ನೇಯ ಜಿಲ್ಲೆ ಎಎಸ್ಪಿ (ಮಹಿಳೆಯರ ವಿರುದ್ಧದ ದೌರ್ಜನ್ಯ). ಜಿಲ್ಲೆಯ ಕೋವಿಡ್ ಘಟಕದ ಎಸಿಪಿ ಹೊಣೆಗಾರಿಕೆಯನ್ನೂ ಹೊಂದಿದ್ದರು. ಮೇ 20ರಂದು ಕೌರ್ ಅವರಿಗೆ ವೈರಸ್ ಪಾಸಿಟಿವ್ ಬಂದಾಗ ಪತಿಯನ್ನೂ ಪರೀಕ್ಷೆಗೆ ಗುರಿಪಡಿಸಲಾಯಿತು. ಫಲಿತಾಂಶ ಪಾಸಿಟಿವ್ ಬಂತು. ಎಸಿಪಿಯವರ 80 ವರ್ಷ ವಯಸ್ಸಿನ ತಂದೆಗೆ ಮೇ 24ರಂದು ಸೋಂಕು ದೃಢಪಟ್ಟಿತು. ಕೌರ್ ಹಾಗೂ ಸಿಂಗ್ ಅವರನ್ನು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು ಹಾಗೂ ಅವರ ತಂದೆಯನ್ನು ಸಾಕೇತದಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಮೇ 26ರಂದು ಕೌರ್ ಗುಣಮುಖರಾಗಿ ಮನೆಗೆ ಬಂದರು.
ಆದರೆ ಸಿಂಗ್ ಅವರ ದೇಹಸ್ಥಿತಿ ವಿಷಮಿಸುತ್ತಾ ಹೋಯಿತು. ವೆಂಟಿಲೇಟರ್ ವ್ಯವಸ್ಥೆ ಅಳವಡಿಸಿದರೂ, ಆಮ್ಲಜನಕ ಮಟ್ಟ ಕುಸಿಯುತ್ತಾ ಹೋಯಿತು. ಮಾತನಾಡಲೂ ಅಸಮರ್ಥರಾಗಿ ವಾಟ್ಸ್ಆ್ಯಪ್ ಸಂದೇಶ ಕಳುಹಿಸುತ್ತಿದ್ದರು ಎಂದು ಕೌರ್ ವಿವರಿಸಿದರು. ಸಿಂಗ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆಯ ಪ್ರಯತ್ನವನ್ನೂ ಮಾಡಲಾಯಿತು. ಆದರೆ ಅವರು ಸ್ಪಂದಿಸಲಿಲ್ಲ ಎಂದು ಕೌರ್ ಸಹೋದರ ಮಣೀಂದರ್ ಅಹ್ಲುವಾಲಿಯಾ ಹೇಳಿದರು.
ಕೆನಡಾದಲ್ಲಿರುವ ಪುತ್ರ ವೀಡಿಯೊ ಕಾಲ್ ಮೂಲಕವೇ ತಂದೆಯ ಅಂತ್ಯಸಂಸ್ಕಾರ ನೋಡುವಂತಾಯಿತು. ವಿಮಾನಗಳಿಲ್ಲದ್ದರಿಂದ ಆತ ಕೆನಡಾದಿಂದ ಬರಲಾಗಲಿಲ್ಲ ಎಂದು ಕೌರ್ ದುಃಖಿಸಿದರು. ಸಿಂಗ್ ಮೋಜಿನ, ಶಿಸ್ತಿನ ಹಾಗೂ ಸಾಹಸಿ ವ್ಯಕ್ತಿ ಎಂದು ಸ್ನೇಹಿತರು ನೆನಪಿಸಿಕೊಂಡರು. ಮಂಗಳವಾರ ಮಧ್ಯಾಹ್ನ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ಕುಟುಂಬ ಸದಸ್ಯರು ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಸಂಕಷ್ಟದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹೋದ್ಯೋಗಿಗಳು ನೀಡಿದ ನೆರವನ್ನು ಎಸಿಪಿ ನೆನೆಸಿಕೊಳ್ಳುತ್ತಾರೆ.







