ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಜೂ. 17: 'ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಬಿಡಬೇಕು ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು. ಇಲ್ಲವಾದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಜನರ ಚಳವಳಿ ರೂಪಿಸುವುದು ಅನಿವಾರ್ಯವಾಗುತ್ತದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
`ರಾಷ್ಟ್ರದಲ್ಲಿ ಮಾರಕ ಕೊರೋನ ಸೋಂಕು ಸಂಕಷ್ಟದಿಂದ ಜನತೆ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಠಕ್ಕೆ ಬಿದ್ದ ಹಾಗೇ ಜನವಿರೋಧಿ ಕಾಯ್ದೆಗಳನ್ನು ತರಲು ಸುಗ್ರೀವಾಜ್ಞೆಗಳ ಮೊರೆ ಹೋಗಿದೆ. ಜನದ್ರೋಹಿ ಮತ್ತು ಕಾರ್ಪೋರೇಟ್ ಪರವಾದ ಕಾನೂನು ತರುತ್ತಿದ್ದು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರೈತರ ಹೊಟ್ಟೆಗೆ ಬೆಂಕಿ ಹಾಕಲು ಹೊರಟ್ಟಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಉಳುವವನೆ ಹೊಲದ ಒಡೆಯನೆಂಬ ಕಾಗೋಡು ಸತ್ಯಾಗ್ರಹದ ಆಶಯವನ್ನು ನೀವು ಉಳ್ಳವನೆ ಭೂಮಿಯ ಒಡೆಯ ಎಂದು ಬದಲಾಯಿಸಿ ರಾಜ್ಯದ ಚರಿತ್ರೆಯಲ್ಲಿ ಶಾಶ್ವತವಾಗಿ ಖಳನಾಯಕನ ಪಾತ್ರವನ್ನು ವಹಿಸಿಕೊಳ್ಳಲು ಹೊರಟಿದ್ದೀರಿ. ಹಾಗಾಗಲು ಬಿಡದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ದುರ್ಬಲಗೊಳಿಸದೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಶಕ್ತಗೊಳಿಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
`ಸರಕಾರಗಳು ಮಾಡಬೇಕಾದ ಕೆಲಸ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಬೇಕಿದೆ. ಇದಕ್ಕೆ ಡಾ.ಸ್ವಾಮಿನಾಥನ್‍ರವರ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಕಲ್ಪಿಸಬೇಕು. ನಾಮಕಾವಸ್ತೆಗೆ ಇರುವ ಕೇಂದ್ರ ಫಸಲ್ ಬಿಮಾ ಯೋಜನೆಯ ಬದಲಿಗೆ ನಿಜಾರ್ಥದಲ್ಲಿ ಕೃಷಿ ವಿಮಾ ನೀತಿಯನ್ನು ಜಾರಿಗೊಳಿಸಬೇಕು. ಅತೀ ಹೆಚ್ಚಿನ ಉದ್ಯೋಗ ಒದಗಿಸುವ ಕೃಷಿ ವಲಯವನ್ನು ಸಶಕ್ತಗೊಳಿಸಬೇಕಾಗಿದೆ' ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.
ಕಾಯ್ದೆಯಲ್ಲಿನ ಲೋಪದೋಷಗಳ ನೆಪದಲ್ಲಿ ಕಾಯ್ದೆ ರದ್ದುಪಡಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ. ಕೆಲ ಅಧಿಕಾರಿಗಳ ದುರ್ವತನೆ ನೆಪದಲ್ಲಿ ಬೆರಳೆಣಿಕೆಯಷ್ಟು ಕಾರ್ಪೋರೇಟ್ ಕಂಪೆನಿಗಳ ಅಥವಾ ಉಳ್ಳವರ ಹಿತಾಸಕ್ತಿಗಾಗಿ ಕೋಟ್ಯಂತರ ರೈತರ ಮೇಲೆ ಸಮಾಧಿ ಕಟ್ಟಲು ಹೊರಟಿರುವುದು ಅಕ್ಷಮ್ಯ ಅಪರಾಧ. ಇದು ನಾಗರಿಕ ಸರಕಾರವೊಂದರಿಂದ ಘಟಿಸಬಹುದದ ಘೋರ ಕೃತ್ಯ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೆ ಅಸ್ತ್ರವಾಗಿ ಬಳಸಿಕೊಂಡು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ದುಷ್ಟತನವನ್ನು ಕೇಂದ್ರ-ರಾಜ್ಯ ಸರಕಾರಗಳು ಮಾಡುತ್ತಿವೆ. ಸರಕಾರಗಳು ಕೊರೋನ ಸಮಸ್ಯೆ ಬಗೆಹರಿಸುವ ಬದಲು ಇಂಥ ಘಾತುಕ ಕೃತ್ಯ ಮಾಡಲು ಹೊರಟರೆ ನಿಮ್ಮನ್ನು ರಕ್ಷಕರೆನ್ನಲಾದೀತೇ? ಕೇಂದ್ರ-ರಾಜ್ಯ ಸರಕಾರಗಳು ಜನರ ಸಂಕಷ್ಟವನ್ನು ದುರುಪಯೋಗ ಮಾಡಿಕೊಂಡು ಬೆನ್ನಲ್ಲಿ ಇರಿಯಹೊರಿರುವ ಕೃತ್ಯವನ್ನು ನಿಲ್ಲಿಸಿ. ಈಗ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ರದ್ದುಪಡಿಸಬೇಕು'
-ಸಿದ್ದರಾಮಯ್ಯ, ವಿಪಕ್ಷ ನಾಯಕ

.jpeg)

_0.jpeg)








