ಭಾರತದೊಂದಿಗೆ ಮತ್ತಷ್ಟು ಹಿಂಸಾತ್ಮಕ ಸಂಘರ್ಷ ಬಯಸಲಾರೆ ಎಂದ ಚೀನಾ

ಬೀಜಿಂಗ್, ಜೂ.17:ಭಾರತದೊಂದಿಗೆ ಗಡಿಯುದ್ದಕ್ಕೂ ಮತ್ತಷ್ಟು ಹಿಂಸಾತ್ಮಕ ಸಂಘರ್ಷ ನಡೆಸಲು ತಾನು ಬಯಸುವುದಿಲ್ಲ ಎಂದು ಬುಧವಾರ ಚೀನಾ ಹೇಳಿದೆ. ಉಭಯ ರಾಷ್ಟ್ರಗಳ ನಡುವೆ ಸೋಮವಾರ ರಾತ್ರಿ ಸಂಭವಿಸಿದ್ದ ಹಿಂಸಾತ್ಮಕ ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರು ಮೃತಪಟ್ಟಿದ್ದರು.
ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಲು ಚೀನಾ ಈ ತನಕ ನಿರಾಕರಿಸಿದೆ.
"ಭಾರತದ ಸೇನಾ ಪಡೆಗಳು ನಮ್ಮದೇಶದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದವು. ಚೀನಾದ ಸೈನಿಕರ ಮೇಲೆ ದಾಳಿ ನಡೆಸಿದ್ದವು. ಹೀಗಾಗಿ ಉಭಯ ದೇಶಗಳ ಸೈನಿಕರ ನಡುವೆ ಗಂಭೀರ ಸಂಘರ್ಷ ನಡೆದಿದ್ದವು'' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಬುಧವಾರ ಪುನರುಚ್ಚರಿಸಿದರು.
"ಮುಂಚೂಣೀ ಸೈನಿಕರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ. ಕಾನೂನುಬಾಹಿರವಾಗಿ ಗಡಿ ದಾಟಬೇಡಿ. ಪ್ರಚೋದನಕಾರಿ ಸನ್ನೆಗಳನ್ನು ಮಾಡಬೇಡಿ. ಗಡಿ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೆ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಚೀನಾವು ಭಾರತವನ್ನು ಒತ್ತಾಯಿಸುತ್ತದೆ'' ಎಂದು ಲಿಜಿಯಾನ್ ಹೇಳಿದ್ದಾರೆ.
"ಎರಡೂ ಕಡೆಯವರು ಸಂವಾದ ಹಾಗೂ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ. ನಾವು ಖಂಡಿತವಾಗಿಯೂ ಗಡಿಭಾಗದಲ್ಲಿ ಮತ್ತಷ್ಟು ಘರ್ಷಣೆ ಆಗುವುದನ್ನು ಬಯಸುವುದಿಲ್ಲ'' ಎಂದು ಲಿಜಿಯಾನ್ ಹೇಳಿದ್ದಾರೆ.







