ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದವರಿಗೆ ತುರ್ತು ನೆರವು: ಡಾ. ಶಾನುಭಾಗ್

ಫೈಲ್ ಫೋಟೊ
ಉಡುಪಿ, ಜೂ.17: ಗಲ್ಫ್ ಪ್ರದೇಶದ ಕತರ್ನಲ್ಲಿ ಕಳೆದ ಮೂರು ತಿಂಗಳಿಂದ ಉದ್ಯೋಗ ಹಾಗೂ ಆದಾಯವಿಲ್ಲದೇ ಸಂಕಷ್ಟಕ್ಕೊಳಗಾದ ಉಡುಪಿ ಜಿಲ್ಲೆಯ ಹಲವಾರು ಮಂದಿ ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಸಹಕಾರ ಯಾಚಿಸಿದ್ದಾರೆ. ಇದೀಗ ಬಹರೈನ್ನಲ್ಲಿರುವ ಪ್ರತಿಷ್ಠಾನದ ಕಾರ್ಯಕರ್ತರಾದ ನವೀನ್ ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವಕರ ತಂಡವೊಂದು ತೊಂದರೆಗೊಳಗಾದವರ ಪಾಸ್ಪೋರ್ಟ್ ನಂಬರ್, ವಿಳಾಸ, ಆಯಾ ದೇಶಗಳಲ್ಲಿ ಅವರ ವೀಸಾ ಹಾಗೂ ಎಂಪ್ಲಾಯ್ಮೆಂಟ್ ನಂಬರ್ ಇತ್ಯಾದಿ ವಿವರಗಳನ್ನು ಸಂಗ್ರಹಿಸಿ ಈಗಾಗಲೇ ಉಡುಪಿಯಲ್ಲಿರುವ ಪ್ರತಿಷ್ಠಾನದ ಕಚೇರಿಗೆ ಕಳುಹಿಸಿದ್ದಾರೆ.
ಪ್ರತಿಷ್ಠಾನ ಈ ವಿವರಗಳನ್ನು ದುಬೈ, ರಿಯಾದ್, ಕತರ್ ಮುಂತಾದ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಿಗೂ, ಹೊಸದಿಲ್ಲಿ ಯಲ್ಲಿರುವ ವಿದೇಶಾಂಗ ಸಚಿವಾಲಯಕ್ಕೂ ತಲುಪಿಸಿದೆ. ಆದಷ್ಟು ಶೀಘ್ರವಾಗಿ ಇವರೆಲ್ಲರನ್ನು ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ರಾಯಭಾರಿ ಕಚೇರಿಗಳಿಂದ ಈಗಾಗಲೇ ಆಶ್ವಾಸನೆಗಳು ಬಂದಿವೆ. ಅಲ್ಲದೇ ಕರ್ನಾಟಕ ಸರಕಾರದ ಗೃಹ ಸಚಿವರನ್ನು ಸಂಪರ್ಕಿಸಿ ಈ ಕಾರ್ಮಿಕರ ಸಹಾಯಕ್ಕೆ ಧಾವಿಸಲು ಅಗ್ರಹಿಸಲಾಗಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೋನ ವೈರಸ್ನಿಂದ ಲಾಕ್ಡೌನ್ ಘೋಷಣೆ ಆದಂದಿನಿಂದ ನೂರಾರು ಕಾರ್ಮಿಕರು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ಭಾರತೀಯ ದೂತಾವಾಸಗಳ ವೆಬ್ಸೈಟ್ನಲ್ಲಿ ರಿಜಿಸ್ಟ್ರೇಶನ್ ಮಾಡಿದ್ದು ಅವರ ಸರತಿಗಾಗಿ ಕಾಯುತಿದ್ದಾರೆ. ಇದೇ ವೇಳೆ ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾದ ರಾಜ್ಯ ಸರಕಾರಗಳು ತಂತಮ್ಮ ರಾಜ್ಯದ ಕಾರ್ಮಿಕರನ್ನು ಹಿಂದೆ ಕರೆತರಲು ಸಾಕಷ್ಟು ವಿಮಾನಗಳ ವ್ಯವಸ್ಥೆ ಮಾಡಿದ್ದು, ಈ ದಿಸೆಯಲ್ಲಿ ಕರ್ನಾಟಕ ಸರಕಾರದ ಅಧಿಕಾರಿಗಳು ಸಾಕಷ್ಟು ಸಹಕಾರ ನೀಡುತ್ತಿಲ್ಲವೆಂದು ಎರಡು ತಿಂಗಳ ಹಿಂದೆಯೇ ವೈಬ್ಸೈಟ್ನಲ್ಲಿ ತನ್ನ ಹೆಸರನ್ನು ನೊಂದಾಯಿಸಿ ತನ್ನ ಸರತಿಗಾಗಿ ಕಾಯುತ್ತಿರುವ ಕಾರ್ಕಳದ ಬಾಸ್ಕರ ಬಂಗೇರ, ಪಾದೂರಿನ ರಘುನಾಥ ಕುಂದರ್, ಬೆಳ್ವೆಯ ಪ್ರವಿೀಣ್ ಸುವರ್ಣ ವಿಷಾದದಿಂದ ತಿಳಿಸಿದ್ದಾರೆ.
ಕತರ್ನಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ಭಾಸ್ಕರ ಬಂಗೇರ ಇದೀಗ 3 ತಿಂಗಳಿಂದಉದ್ಯೋಗವಿಲ್ಲದೇ ತಮ್ಮ ಉಳಿತಾಯದ ಹಣವೂ ಖಾಲಿಯಾಗಿದೆ. ಇದೀಗ ಕುಟುಂಬದವರನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂಥವರಲ್ಲಿ ಹೆಚ್ಚಿನ ಕಾರ್ಮಿಕರು ಅವಿದ್ಯಾವಂತರಾಗಿರುವುದರಿಂದ ಈಮೈಲ್, ಟ್ವೀಟರ್, ಪೇಸ್ಬುಕ್ನಂತಹ ಸಂಪರ್ಕ ಮಾಧ್ಯಮಗಳ ಮೂಲಕ ರಾಯಬಾರಿ ಕಚೇರಿಯನ್ನು ಸಂಪರ್ಕಿಸಲು ಅಸಮರ್ಥಗಿದ್ದಾರೆ. ಇಂತಹ ಅಸಹಾಯಕರ ನೆರವಿಗೆ ಧಾವಿಸಲು ಗಲ್ಫ್ ನಲ್ಲಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯಕರ್ತರೆಲ್ಲ ಸೇರಿ ತುಳುನಾಡ ಗಲ್ಫ್ ಕಮಿಟಿಯೊಂದನ್ನು ರಚಿಸಿಕೊಂಡಿದ್ದಾರೆ.
ಗುರುಪುರದ ಮಳಲಿಮಟ್ಟಿಯ ನವೀನ್ ಪೂಜಾರಿ ಎಂಬವರು ಬಹರೈನ್ ನಲ್ಲಿದ್ದು, ಅವರ ನೇತೃತ್ವದಲ್ಲಿ ಕಾಜಿಲದ ರಾಜೇಶ್ ಸುವರ್ಣ (ಸೌದಿ ಅರೇಬಿಯ), ಗುರುಪುರದ ಜಯರಾಜ್ ಭಂಡಾರಿ(ಬಹರೈನ್), ಬಜ್ಪೆಯ ನಿತಿನ್ಕುಮಾರ್ (ಕತರ್), ಗಂಗೊಳ್ಳಿಯ ಮಹಮ್ಮದ್ ಅಜಮ್(ಸೌದಿ ಅರೇಬಿಯ), ಗಂಜಿಮಠದ ಯೋಗೀಶ(ದುಬೈ) ಈ ಸಮಿತಿಯ ಸ್ವಯಂಸೇವಕರಾಗಿದ್ದಾರೆ.
ಸಂಕಷ್ಟಕ್ಕೊಳಗಾಗಿರುವವರು ತುರ್ತುನೆರವಿಗಾಗಿ ತಮ್ಮ ಮೊಬೈಲ್ ನಂಬ್ರ ದೊಂದಿಗೆ ಪಾಸ್ಪೋರ್ಟ್ ನಂಬ್ರ, ವಿಳಾಸ, ಆಯಾ ದೇಶಗಳ ಅವರ ವೀಸಾ ವಿವರಗಳು, ಎಂಪ್ಲಾಯ್ಮೆಂಟ್ ನಂಬರ್ ಹಾಗೂ ವೆಬ್ಸೈಟ್ನಲ್ಲಿ ನೋಂದಾಯಿಸಿದ ವಿವರಗಳೊಂದಿಗೆ ನೇರವಾಗಿ ನವೀನ್ ಪೂಜಾರಿ ಇವರನ್ನು (97332010859) ಸಂಪರ್ಕಿಸಬಹುದು ಎಂದು ಡಾ.ಶಾನುಭಾಗ್ ತಿಳಿಸಿದ್ದಾರೆ.
ಅಕ್ರಮವಾಗಿ ಗಲ್ಫ್ ಸೇರಿದವರ ವ್ಯಥೆ: ಇದೇ ವೇಳೆ ಅನೇಕ ಮಂದಿ ಕಾನೂನು ಬಾಹಿರವಾಗಿ ಗಲ್ಫ್ ಸೇರಿದವರೂ ವೆಬ್ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸುತಿದ್ದಾರೆ. ಅವರಲ್ಲಿ ಕಾನೂನುಬದ್ಧ ವೀಸಾ ಇಲ್ಲ. ಅವರಿಗೆ ಎಂಪ್ಲಾಯ್ಮೆಂಟ್ ನಂಬರ್ ಸಹ ಸಿಕ್ಕಿಲ್ಲ. ಸದ್ಯಕ್ಕೆ ಇವರಿಗೆ ಯಾವ ರೀತಿಯಲ್ಲಿಯೂ ಸಹಾಯ ಮಾಡಲು ಸಾಧ್ಯವಿಲ್ಲವಾಗಿದೆ ಎಂದು ಡಾ.ರವೀಂದ್ರನಾಥ ಶಾನುಭಾಗ್ ಸ್ಪಷ್ಟಪಡಿಸಿದ್ದಾರೆ.







