ಮಂಗಳೂರು ನೆಹರೂ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಹೈಕೋರ್ಟ್ ತಡೆ
"ಸ್ಮಾರ್ಟ್ ಸಿಟಿ ಎಂದರೆ ಕಾಂಕ್ರೀಟ್ ಜಂಗಲ್ ಮಾಡುವುದಾ?"

ಬೆಂಗಳೂರು, ಜೂ.17: ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ವಿಜಯ ಸುವರ್ಣ, ಮುಹಮ್ಮದ್ ಹುಸೈನ್, ಅಂಥೋಣಿ ಸೆಬಾಸ್ಟಿಯನ್ ಫರ್ನಾಂಡಿಸ್ ಸೇರಿ 11 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನೆಹರೂ ಮೈದಾನದಲ್ಲಿ 5.5 ಕೋಟಿ ವೆಚ್ಚದಲ್ಲಿ 300 ತಾತ್ಕಾಲಿಕ ಶಾಪ್‍ಗಳ ನಿರ್ಮಾಣಕ್ಕೆ ಮುಂದಾಗಿದ್ದಿರಾ? ಆದರೆ, ಮುಂದೆ ಅದನ್ನು ಹೇಗೆ ತೆರವುಗೊಳಿಸುತ್ತಿರಾ? ಎಂದು ನ್ಯಾಯಪೀಠವು ಪ್ರಶ್ನೆ ಮಾಡಿದೆ. ಮುಂದೆ ಕೆಲವರು ಮಾರುಕಟ್ಟೆಯನ್ನು ತೆರವುಗೊಳಿಸದಂತೆ ಕೋರ್ಟ್‍ಗೆ ಬರುವ ಸಾಧ್ಯತೆಯೂ ಇದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಕೆ.ಆರ್.ಮಾರುಕಟ್ಟೆಯಲ್ಲಿ ತೊಂದರೆ ಎಂದು ಕಬ್ಬನ್ ಪಾರ್ಕ್‍ನಲ್ಲಿ ಮಾರುಕಟ್ಟೆ ಮಾಡುತ್ತಿರಾ? ಈ ರೀತಿ ಮಾಡುವುದು ಸಮಂಜಸವೇ? ಅದಕ್ಕೆ ಬೇರೆ ಜಾಗ ಗುರುತಿಸಬೇಕು. ಈ ಉದಾಹರಣೆ ನೀಡಿ ಮಂಗಳೂರು ಕಾರ್ಪೋರೇಷನ್‍ಗೆ ಎಚ್ಚರಿಸಿದ ನ್ಯಾಯಪೀಠವು, ಇನ್ನೂ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ಕಾಮಗಾರಿ ಮಾಡುತ್ತಾ ಇದ್ದೀರಾ? ಸ್ಮಾರ್ಟ್ ಸಿಟಿ ಎಂದರೇನು? ಎಲ್ಲ ಕಾಂಕ್ರೀಟ್ ಜಂಗಲ್ ಮಾಡುವುದಾ? ಮಂಗಳೂರು ಕಾರ್ಪೋರೇಷನ್ ಪರ ವಕೀಲರಿಗೆ ಪ್ರಶ್ನೆ ಮಾಡಿದ ಹೈಕೋರ್ಟ್ ಪೀಠ ತಕ್ಷಣ ಈಗ ನಡೆಸುತ್ತಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ಎಚ್.ಸುನೀಲ್ ಕುಮಾರ್ ಅವರು, ಈ ಹಿಂದೆ ಮೂರು ಬಾರಿ ಸರಕಾರ ಪಾರ್ಕ್ ಮತ್ತು ಗ್ರೌಂಡ್ ಎಂದು ನೋಟಿಫಿಕೇಶನ್ ಮಾಡಿದೆ. 1985, 2010. 2017ರಲ್ಲಿ ಸರಕಾರದಿಂದ ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಅದಕ್ಕೆ ಯಾವುದೇ ಆಕ್ಷೇಪಣೆ ಕೂಡ ಬಂದಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪಾರ್ಕ್ ಮತ್ತು ಗ್ರೌಂಡ್ ಎಂದು ಘೋಷಣೆಯಾಗಿಲ್ಲ ಎಂಬುದರ ಬಗ್ಗೆ 2 ತಿಂಗಳಲ್ಲಿ ಉತ್ತರಿಸಲು ಹೈಕೋರ್ಟ್ ರಾಜ್ಯ ಸರಕಾರ ಪರ ವಕೀಲರಿಗೆ ಉತ್ತರಿಸಲು ಸೂಚನೆ ನೀಡಿತು.
ಪ್ರಕರಣದ ಹಿನ್ನೆಲೆ: ಮಂಗಳೂರು ಸಿಟಿ ಕಾರ್ಪೋರೇಷನ್ ತಾತ್ಕಾಲಿಕವಾಗಿ ನೆಹರು ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದ 5.5 ಕೋಟಿ ವೆಚ್ಚದಲ್ಲಿ 300 ಮಳಿಗೆಗಳ ಮಾರುಕಟ್ಟೆ ಮಾಡಲು ತೀರ್ಮಾನ ಮಾಡಲಾಗಿತ್ತು. ಮಾಂಸ ಮತ್ತು ತರಕಾರಿ ಮಳಿಗೆಗಳಿಗೆ ಅನುಮತಿ ನೀಡಲು ಸಹ ಮುಂದಾಗಿತ್ತು. ಇದಕ್ಕೆ ಸ್ಥಳೀಯರು ಮತ್ತು ಕೆಲ ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸಿದ್ದರು.
ಇದನ್ನು ಪ್ರಶ್ನಿಸಿ ಮಂಗಳೂರು ನಿವಾಸಿಗಳಾದ ವಿಜಯ್ ಸುವರ್ಣ ಮತ್ತು 10 ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳೂರಿನ ಸಿಟಿ ಕಾರ್ಪೋರೇಷನ್ ಪರವಾಗಿ ವಕೀಲ ನಿತೀಶ್ ಮತ್ತು ಸರಕಾರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತ್ತು.







