ಮಡಿಕೇರಿ: ತೋಟ ಬಿಟ್ಟು ಕದಲದ ಕಾಡಾನೆ; ಇಂದು ಮತ್ತೆ ಕಾರ್ಯಾಚರಣೆ

ಮಡಿಕೇರಿ, ಜೂ.17 : ಕಳೆದ ಒಂದು ವಾರದಿಂದ ಅಭ್ಯತ್‍ಮಂಗಲ ಮತ್ತು ಅತ್ತಿಮಂಗಲ ಭಾಗದಲ್ಲಿ ನೆಲೆ ನಿಂತು ಆತಂಕ ಸೃಷ್ಟಿಸಿರುವ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವ ಅರಣ್ಯ ಇಲಾಖೆಯ ಕಾರ್ಯಾಚರಣೆ ವಿಫಲವಾಗಿದೆ.
ಇತ್ತೀಚೆಗೆ ಪತ್ರಿಕೆ ಕಾಡಾನೆ ಹಾವಳಿ ಕುರಿತು ವರದಿ ಮಾಡಿದ ಹಿನ್ನೆಲೆ ಇಂದು ಮೀನುಕೊಲ್ಲಿ ಅರಣ್ಯ ವಿಭಾಗದ ವನಪಾಲಕ ಕೂಡಕಂಡಿ ಸುಬ್ರಾಯ ಅವರ ನೇತೃತ್ವದಲ್ಲಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಿತು. ಕೋಡಿರ ಎಸ್ಟೇಟ್ ನಲ್ಲಿದ್ದ ಏಳು ಆನೆಗಳು ಹಾಗೂ ಅತ್ತಿಮಂಗಲದ ಪಿಂಟೋ ಎಸ್ಟೇಟ್‍ನಲ್ಲಿದ್ದ 20 ಆನೆಗಳನ್ನು ಒಮ್ಮೆಗೇ ಓಡಿಸುವ ಕಾರ್ಯತಂತ್ರ ರೂಪಿಸಲಾಗಿತ್ತು. ಸುರಿಯುತ್ತಿದ್ದ ಮಳೆಯ ನಡುವೆಯೇ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಲಾಯಿತ್ತಾದರೂ ಕೋಡಿರ ಎಸ್ಟೇಟ್ ಸಮೀಪ ಏಳು ಆನೆಗಳು ತಾವಿದ್ದ ಪ್ರದೇಶದಿಂದ ಕದಲೇ ಇಲ್ಲ. ಅನಿವಾರ್ಯವಾಗಿ ಕಾರ್ಯಾಚರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.
ಅರಣ್ಯ ಸಿಬ್ಬಂದಿಗಳಾದ ಚರಣ್, ರವಿ, ಜಗದೀಶ್, ಅಪ್ಪಸ್ವಾಮಿ, ತಿಲಕ, ಆಸೀಸ್, ಕಿರಣ್, ವಿಜಯ ಹಾಗೂ ಚಾಲಕ ವಾಸು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






