ಜೂ.21ರಂದು ಮತ್ತೆ ನಡೆಯಲಿದೆ ಸೂರ್ಯಗ್ರಹಣ
ಉಡುಪಿ, ಜೂ.17: ಇದೇ ಜೂ.21ರ ರವಿವಾರ ಮತ್ತೊಂದು ಸೂರ್ಯಗ್ರಹಣಕ್ಕೆ ಜನತೆ ಸಾಕ್ಷಿಯಾಗಲಿದೆ. ಕಳೆದ ಡಿ.26ರ ಕಂಕಣ ಸೂರ್ಯ ಗ್ರಹಣದ ಬಳಿಕ ಸಂಭವಿಸುತ್ತಿರುವ 2020ರ ಮೊದಲ ಸೂರ್ಯ ಗ್ರಹಣ ಇದಾಗಿದೆ.
ಅಮಾವಾಸ್ಯೆಯ ದಿನದಂದು ಚಂದ್ರ, ಸೂರ್ಯ ಮತ್ತು ಭೂಮಿಯ ನಡುವೆ ನಿಖರವಾದ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ. ಏಕೆಂದರೆ ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವೆ ಎಲ್ಲಾ ಅಮಾವಾಸ್ಯೆಯ ದಿನಗಳಲ್ಲಿ ನಿಖರವಾಗಿ ಇರುವುದಿಲ್ಲ. ಯಾಕೆಂದರೆ ಚಂದ್ರನ ಮಾರ್ಗವು ಸೂರ್ಯನ ಮಾರ್ಗದಿಂದ 5 ಡಿಗ್ರಿಗಳಷ್ಟು ಓರೆಯಾಗಿದೆ.
ಸೂರ್ಯ ಮತ್ತು ಚಂದ್ರನ ಗಾತ್ರ ವ್ಯತ್ಯಾಸ, ಭೂಮಿ-ಸೂರ್ಯ ಹಾಗೂ ಭೂಮಿ-ಚಂದ್ರನ ನಡುವಿನ ಅಂತರದಿಂದಾಗಿ, ಭೂಮಿಯಿಂದ ಗಮನಿಸಿದಾಗ ಸೂರ್ಯ ಮತ್ತು ಚಂದ್ರನ ಗಾತ್ರ ಒಂದೇ ಆಗಿ ಭಾಸವಾಗುತ್ತದೆ. ಇದರಿಂದಾಗಿಯೇ ಗ್ರಹಣದ ಸೌಂದರ್ಯವು ನಮಗೆ ಗೋಚರಿಸುವುದು.
ಎಲ್ಲಾ ಗ್ರಹಗಳಂತೆ, ಚಂದ್ರನು ಭೂಮಿಯ ಸುತ್ತ ಅಂಡಾಕಾರದ ಮಾರ್ಗ ದಲ್ಲಿ ಚಲಿಸುತ್ತಾನೆ. ಇದರಿಂದಾಗಿ ಚಂದ್ರನು ತನ್ನ ಮಾರ್ಗದಲ್ಲಿ ಒಮ್ಮೆ ಭೂಮಿಗೆ ಹತ್ತಿರವಾದರೆ, ಇನ್ನೊಮ್ಮೆ ದೂರವಿರುತ್ತಾನೆ. ಆದ್ದರಿಂದ, ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದರೆ, ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ.ಅದು ಖಗ್ರಾಸ ಸೂರ್ಯಗ್ರಹಣವಾಗುತ್ತದೆ. ಆದರೆ ಚಂದ್ರ, ಭೂಮಿಯಿಂದ ಸಾಕಷ್ಟು ದೂರದಲ್ಲಿದ್ದಾಗ, ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚಲು ಸಾಧ್ಯವಾಗುವುದಿಲ್ಲ. ಆಗ ಸೂರ್ಯನು ಬಳೆಯ ಆಕಾರದಲ್ಲಿ ಕಾಣುತ್ತಾನೆ. ಆಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ.
ಜೂ.21ರ ಗ್ರಹಣವು ಆಫ್ರಿಕಾ ಖಂಡದ ಕಾಂಗೋ, ದಕ್ಷಿಣ ಸುಡಾನ್ನಲ್ಲಿ ಕಂಕಣ ಸೂರ್ಯಗ್ರಹಣವಾಗಿ ಕಾಣಿಸಿಕೊಳ್ಳುತ್ತದೆ. ಏಷ್ಯಾದ ಒಮಾನ್, ಯೆಮೆನ್, ಪಾಕಿಸ್ತಾನ, ಭಾರತ, ಚೀನಾ ದೇಶಗಳ ಮೂಲಕ ಗುವಾಮ್ ದ್ವೀಪಗಳಲ್ಲಿ ಗರಿಷ್ಠ ಸ್ಥಿತಿ ತಲುಪುತ್ತದೆ. ಭಾರತದಿಂದ ಚೀನಾಕ್ಕೆ ತೆರಳುವ ಮೊದಲು ರಾಜಸ್ಥಾನ, ಹರಿಯಾಣ ಮತ್ತು ಉತ್ತರಾಖಂಡದ ಮೂಲಕ ಹಾದುಹೋಗುತ್ತದೆ. ಸಿರ್ಸಾ, ಕುರುಕ್ಷೇತ್ರ, ಡೆಹ್ರಾಡೂನ್, ಟೆಹ್ರಿ ಮತ್ತು ಹಿಮಾಲಯ ಪರ್ವತದ ಕೆಲವು ಸ್ಥಳಗಳಲ್ಲಿ ಶೇ.98.2ರಷ್ಟು ಸೂರ್ಯನನ್ನು ಆವರಿಸಿಕೊಂಡು ಬಹಳ ತೆಳುವಾದ ಬಳೆಯಾಕಾರವು ಕಾಣಸಿಗುತ್ತದೆ.
ಉಡುಪಿಯಲ್ಲಿ ಸೂರ್ಯನ ಶೇ.40.38ರಷ್ಟು ಭಾಗವನ್ನು ಚಂದ್ರನು ಆವರಿಸಿರುವುದರಿಂದ ಖಂಡಗ್ರಾಸ ಗ್ರಹಣವು ಕಾಣಿಸುತ್ತದೆ. ಬೆಳಗ್ಗೆ 10:04ಕ್ಕೆ ಪ್ರಾರಂಭವಾಗಿ ಅಪರಾಹ್ನ 1:22ಕ್ಕೆ ಕೊನೆಗೊಳ್ಳಲಿದೆ. ಬೆಳಗ್ಗೆ 11:37 ಗರಿಷ್ಠ ಗ್ರಹಣದ ಸಮಯವಾಗಿರುತ್ತದೆ.
ಮಂಗಳೂರಿನಲ್ಲೂ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಚಂದ್ರ ಶೇ.38.71ರಷ್ಟು ಭಾಗ ಸೂರ್ಯನನ್ನು ಆವರಿಸುತ್ತಾನೆ. ಇಲ್ಲಿ ಗ್ರಹಣ ಬೆಳಿಗ್ಗೆ 10:04ಕ್ಕೆ ಪ್ರಾರಂಭವಾಗಿ 11:37ಕ್ಕೆ ಗರಿಷ್ಠ ಮತ್ತು ಅಪರಾಹ್ನ 1:21ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣ ಒಟ್ಟು 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ. ಗ್ರಹಣವನ್ನು ವೀಕ್ಷಿಸುವ ವಿಷಯಕ್ಕೆ ಬಂದಾಗ, ಜನರು ಬರಿಗಣ್ಣಿನಿಂದ ನೇರವಾಗಿ ಗ್ರಹಣವನ್ನು ವೀಕ್ಷಿಸದಂತೆ ಎಚ್ಚರಿಸಲಾಗುತ್ತದೆ. ಸೌರ ಫಿಲ್ಟರ್‌ಗಳನ್ನು ಹೊಂದಿ ರುವ ಕನ್ನಡಕಗಳ ಮೂಲಕ ಮಾತ್ರ ಗ್ರಹಣವನ್ನು ನೇರವಾಗಿ ವೀಕ್ಷಿಸಬಹುದು.
ಸೂರ್ಯನನ್ನು ನೋಡಿದ ನಂತರ, ಕೂಡಲೇ ಕನ್ನಡಕಗಳನ್ನು ತೆಗೆಯದೆ ಬದಲಿಗೆ ನೆಲದ ಕಡೆಗೆ ತಿರುಗಿ ಕನ್ನಡಕ/ಫಿಲ್ಟರ್ಗಳನ್ನು ತೆಗೆಯಬೇಕು.
ಕೆಮರಾ, ಬೈನಾಕ್ಯುಲರ್ ಅಥವಾ ದೂರದರ್ಶಕಗಳನ್ನು ಬಳಸಿ ಫಿಲ್ಟರ್ ಇಲ್ಲದೆ ಗ್ರಹಣವನ್ನು ಎಂದಿಗೂ ನೋಡಬಾರದು ಏಕೆಂದರೆ ಅದು ಕ ಣ್ಣಿಗೆ ಹಾನಿಯನ್ನುಂಟು ಮಾಡುತ್ತದೆ.
ಕೆಮರಾ, ಬೈನಾಕ್ಯುಲರ್ ಅಥವಾ ದೂರದರ್ಶಕಗಳನ್ನು ಬಳಸಿ ಫಿಲ್ಟರ್ ಇಲ್ಲದೆ ಗ್ರಹಣವನ್ನು ಎಂದಿಗೂ ನೋಡಬಾರದು ಏಕೆಂದರೆ ಅದು ಕಣ್ಣಿಗೆ ಹಾನಿಯನ್ನುಂಟು ಮಾಡುತ್ತದೆ. ಗ್ರಹಣವನ್ನು ವೀಕ್ಷಿಸಲು ಸುರಕ್ಷಿತ ವಿಧಾನಗಳನ್ನು ಅನುಸರಿಸುವಂತೆ ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಮನವಿ ಮಾಡಿದೆ. ಈ ಭಾಗದಲ್ಲಿ ಮುಂದಿನ ಇಂಥ ಖಗೋಳ ವಿದ್ಯಮಾನ 2022ರ ಅಕ್ಟೋಬರ್ 25ರಂದು ಸಂಭವಿಸಲಿದೆ.







