ವೈದ್ಯರು, ಆರೋಗ್ಯ ಕಾರ್ಯಕರ್ತರ ಕ್ವಾರಂಟೈನ್,ವೇತನಗಳ ಕುರಿತು ನಿರ್ದೇಶ ಹೊರಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ,ಜೂ.17: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕ್ವಾರಂಟೈನ್ ಮತ್ತು ಆರೋಗ್ಯ ಕಾರ್ಯಕರ್ತರ ವೇತನಗಳಿಗೆ ಸಂಬಂಧಿಸಿದಂತೆ ಗುರುವಾರದೊಳಗೆ ನಿರ್ದೇಶಗಳನ್ನು ಹೊರಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ಸೂಚಿಸಿದೆ.
ಈ ನಿರ್ದೇಶಗಳನ್ನು ಪಾಲಿಸದಿರುವುದನ್ನು ವಿಪತ್ತು ನಿರ್ವಹಣಾ ಕಾಯ್ದೆ, 2005ರಡಿ ಅಪರಾಧವನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿರುವ ನ್ಯಾಯಾಲಯವು, ನಾಲ್ಕು ವಾರಗಳಲ್ಲಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿದೆ.
ಆಸ್ಪತ್ರೆಗಳಿಗೆ ಸಮೀಪದಲ್ಲಿರುವ ಹೋಟೆಲ್‌ಗಳು ಮತ್ತು ಗೆಸ್ಟ್ ಹೌಸ್‌ಗಳನ್ನು ಸ್ವಾಧೀನ ಪಡಿಸಿಕೊಂಡು ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ತೊಡಗಿಕೊಂಡಿರುವ ವೈದ್ಯರಿಗೆ ಪ್ರತ್ಯೇಕ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೋರಿ ಡಾ.ಆರುಷಿ ಜೈನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ಹಾಲಿ ಆರೋಗ್ಯ ಕಾರ್ಯಕರ್ತರು ರೂಮ್‌ಗಳನ್ನು ಹಂಚಿಕೊಳ್ಳುವಂತಾಗಿದ್ದ್ದು,ಇದು ಕ್ವಾರಂಟೈನ್‌ನ ಉದ್ದೇಶವನ್ನೇ ವಿಫಲಗೊಳಿಸಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ. ಕೇಂದ್ರವು ಮೇ 15ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ಆರೋಗ್ಯ ಕಾರ್ಯಕರ್ತರನ್ನು ಮಾತ್ರ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವ ಅಗತ್ಯವಿದೆ ಎಂದು ತಿಳಿಸಿತ್ತು.
ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ ಭೂಷಣ, ಎಸ್.ಕೆ.ಕೌಲ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠವು ಹೇಳಿತು.
ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೊರೋನ ವೈರಸ್ ರೋಗಿಗಳ ಸಂಪರ್ಕಕ್ಕೆ ಬರುವ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರನ್ನು ಒಂದು ವಾರದ ಅವಧಿಗೆ ಕ್ವಾರಂಟೈನ್‌ನಲ್ಲಿರಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ವಸತಿಗೆ ಸಂಬಂಧಿಸಿದಂತೆ ಅವರು,ವೈದ್ಯರಿಗೆ ಪಂಚತಾರಾ ಹೋಟೆಲ್‌ಗಳಲ್ಲಿಯೂ ವಸತಿಯನ್ನು ಕಲ್ಪಿಸಲಾಗಿದೆ. ಏನಾದರೂ ಲೋಪಗಳಿರಬಹುದು ಮತ್ತು ಅವುಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಕಾರ್ಯಕರ್ತರಿಗೆ ವೇತನಗಳನ್ನು ಪಾವತಿಸಲೇಬೇಕು,ಇಲ್ಲದಿದ್ದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಸೂಚಿಸಿ ಕೇಂದ್ರವು ನಿರ್ದೇಶವನ್ನು ಹೊರಡಿಸಬಹುದು ಎಂದೂ ಮೆಹ್ತಾ ತಿಳಿಸಿದರು.