ಮದುವೆಯಾದ ಕೆಲವೇ ಗಂಟೆಯಲ್ಲಿ ವರ ಆಸ್ಪತ್ರೆಗೆ ಶಿಫ್ಟ್!

ಸಾಂದರ್ಭಿಕ ಚಿತ್ರ
ಬೀದರ್, ಜೂ. 17: ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ಕೊರೋನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹುಲಸೂರು ತಾಲೂಕಿನ ಬೇಲೂರಿನಲ್ಲಿ ನಡೆದಿದೆ.
ವಿವಾಹ ಮುಗಿಸಿ ನವದಂಪತಿಗಳು ಒಟ್ಟಿಗೆ ಇರಬೇಕಿದ್ದ ಸಮಯದಲ್ಲೇ ಮನೆ ಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿ ಆತನನ್ನು ಕರೆಯೊಯ್ದಿದ್ದಾರೆ. ಭಾಲ್ಕಿ ತಾಲೂಕಿನ ಕೋನಮೆಳಕುಂದದಲ್ಲಿ ಬೇಲೂರಿನ 25 ವರ್ಷದ ಯುವಕನ ಮದುವೆ ಸೋಮವಾರ ಬೆಳಗ್ಗೆ ನಡೆದಿತ್ತು. ಅಂದು ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಬಂದ ಯುವಕನಿಗೆ ಶಾಕ್ ಕಾದಿತ್ತು!
ಮಹಾರಾಷ್ಟ್ರದದಿಂದ ಬೀದರ್ ಜಿಲ್ಲೆಗೆ ಆಗಮಿಸಿದ ಬೇಲೂರಿನ ಯುವಕನಿಗೆ ಮೇ 19 ರಿಂದ 30 ರವೆರಗೂ ಕ್ವಾರಂಟೈನ್ ಮಾಡಲಾಗಿತ್ತು. ಆಗ ಯುವಕನ ಗಂಟಲುದ್ರವ ಪಡೆದು ಕೊರೋನ ಪರೀಕ್ಷೆಗೆ ಕಳುಹಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ವರದಿ ಬರುವ ಮುನ್ನವೇ ಈತ ಸ್ವಗ್ರಾಮಕ್ಕೆ ಆಗಮಿಸಿದ್ದ.
ಹದಿನೈದು ದಿನಗಳ ಬಳಿಕ ಈತನಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಈತನನ್ನು ಹುಡುಕಿಕೊಂಡು ವೈದ್ಯರು ಮತ್ತು ಸಿಬ್ಬಂದಿ ಆಂಬುಲೆನ್ಸ್ ಜತೆ ಯುವಕನ ಮನೆ ಮುಂದೆ ಬಂದಿದ್ದರು. ಆಸ್ಪತ್ರೆಗೆ ಹೋಗಲು ತೀವ್ರ ವಿರೋಧದ ನಡುವೆಯೂ ಮಧುಮಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದುವೆಯಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರಲ್ಲಿ ಇದೀಗ ಕೊರೋನ ಆತಂಕ ಆವರಿಸಿಕೊಂಡಿದೆ.





