ಲಡಾಖ್ ಗಡಿ ಸಂಘರ್ಷ: ಶುಕ್ರವಾರ ಸರ್ವಪಕ್ಷ ಸಭೆ ಕರೆದ ಪ್ರಧಾನಿ
ಹೊಸದಿಲ್ಲಿ, ಜೂ.17: ಲಡಾಖ್ ಗಡಿಭಾಗದಲ್ಲಿ ಭಾರತ-ಚೀನಾ ಯೋಧರ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಜೂನ್ 19ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
19ರಂದು ಸಂಜೆ 5ಗಂಟೆಗೆ ಆನ್‌ಲೈನ್ ಮೂಲಕ (ವರ್ಚುವಲ್) ನಡೆಯುವ ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಮಂತ್ರಿಯ ಕಚೇರಿ ತಿಳಿಸಿದೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಉಭಯ ಸೇನೆಗಳ ಮಧ್ಯೆ ನಡೆದಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಮೃತಪಟ್ಟಿದ್ದಾರೆ. ಎರಡೂ ಕಡೆ ಸಾವು ನೋವು ಸಂಭವಿಸಿದೆ. ಚೀನಾದ ಕನಿಷ್ಟ 45 ಯೋಧರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಸೇನಾಪಡೆಯ ಮೂಲಗಳು ಸುದ್ಧಿಸಂಸ್ಥೆಗೆ ತಿಳಿಸಿವೆ.
ಕರ್ನಲ್ ಸಹಿತ ಭಾರತದ ಮೂವರು ಯೋಧರು ಮೃತಪಟ್ಟಿರುವುದನ್ನು ಮಂಗಳವಾರ ಬೆಳಿಗ್ಗೆ ಸೇನೆ ದೃಢಪಡಿಸಿತ್ತು. ಗಂಭೀರ ಗಾಯಗೊಂಡಿದ್ದ 17 ಯೋಧರು ಆ ಪ್ರದೇಶದಲ್ಲಿದ್ದ ಶೂನ್ಯಕ್ಕಿಂತ ಕಡಿಮೆ ತಾಪಮಾನದಿಂದ ಚೇತರಿಸಿಕೊಳ್ಳಲಾಗದೆ ಮೃತಪಟ್ಟರು ಎಂದು ಸೇನಾಮೂಲಗಳು ಹೇಳಿವೆ. ಗಲ್ವಾನ್ ನದಿ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಭಾರತದ ಭೂಭಾಗದಲ್ಲಿ ಚೀನಾ ಸೇನೆ ನಿರ್ಮಿಸಿರುವ ಟೆಂಟ್ ಘರ್ಷಣೆಗೆ ಮೂಲ ಕಾರಣ ಎಂದು ಭಾರತ ಹೇಳಿದೆ.
ಗಲ್ವಾನ್ ನದಿ ಕಣಿವೆಯ 15000 ಅಡಿ ಎತ್ತರದಲ್ಲಿ ನಿರ್ಮಿಸಿರುವ ಟೆಂಟ್ ಅನ್ನು ತೆರವುಗೊಳಿಸಲು ಜೂನ್ 6ರಂದು ನಡೆದಿದ್ದ ಉಭಯ ಸೇನಾಪಡೆಗಳ ಲೆಫ್ಟಿನೆಂಟ್ ಜನರಲ್ ಮಟ್ಟದ ಸಭೆಯಲ್ಲಿ ಚೀನಾ ಒಪ್ಪಿಕೊಂಡಿತ್ತು. ಆದರೆ ತೆರವುಗೊಳಿಸಿರಲಿಲ್ಲ. ಸೋಮವಾರ (ಜೂ.15) ಈ ಟೆಂಟನ್ನು ತೆರವುಗೊಳಿಸಲು ಭಾರತದ ಕೆಲವು ಸೈನಿಕರು ಮುಂದಾದಾಗ, ಎತ್ತರದ ಸ್ಥಳದಲ್ಲಿದ್ದ ಚೀನಾದ ಸೈನಿಕರು ಕಲ್ಲೆಸೆದರು. ಬಳಿಕ ಕಬ್ಬಿಣದ ರಾಡ್ ಮತ್ತು ಮೊಳೆ ಜಡಿದಿರುವ ದೊಣ್ಣೆಯಿಂದ ಭಾರತದ ಸೈನಿಕರ ಮೇಲೆ ದಾಳಿ ನಡೆಸಿದರು. ಗುಂಡಿನ ದಾಳಿ ನಡೆದಿಲ್ಲ. ಆದರೆ ಪರಸ್ಪರ ಕಲ್ಲು ಮತ್ತು ಮುಷ್ಟಿಯಿಂದ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈಗ ಈ ಪ್ರದೇಶದಿಂದ ಉಭಯ ಸೇನೆಗಳೂ ಹಿಂದೆ ಸರಿದಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯಲ್ಲಿ ಇನ್ನಷ್ಟು ಘರ್ಷಣೆ ತಪ್ಪಿಸಲು ಬಯಸಿರುವುದಾಗಿ ಹೇಳಿರುವ ಚೀನಾ , ಭಾರತದ ಸೇನೆ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದೆ. ಆದರೆ ಗಲ್ವಾನ್ ಕಣಿವೆ ಭಾಗದಲ್ಲಿನ ಯಥಾಸ್ಥಿತಿಯನ್ನು ಚೀನಾದ ಯೋಧರು ಏಕಪಕ್ಷೀಯವಾಗಿ ಬದಲಿಸಲು ಪ್ರಯತ್ನಿಸಿರುವುದು ಘರ್ಷಣೆಗೆ ಕಾರಣ ಎಂದು ಭಾರತ ಆರೋಪಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಅಮೆರಿಕಾ, ಚೀನಾ ಮತ್ತು ಭಾರತದ ಗಡಿ ವಿವಾದಕ್ಕೆ ಶಾಂತಿಯುತವಾಗಿ ಪರಿಹಾರವಾಗಲಿದೆ ಎಂಬ ನಿರೀಕ್ಷೆಯಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ ಎಂದಿದೆ.