ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣ: 800 ಪುಟಗಳ ಎಂಟು ಚಾರ್ಜ್ಶೀಟ್ ಸಲ್ಲಿಕೆ
ಇನ್ನು 24 ಚಾರ್ಜ್ಶೀಟ್ ಸಲ್ಲಿಕೆಗೆ ಬಾಕಿ
ಫೈಲ್ ಫೋಟೊ
ಮಂಗಳೂರು : ನಗರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣಾ ಪಟ್ಟಿಯನ್ನು ಮಂಗಳೂರಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಪ್ರಕರಣದ ತನಿಖಾ ಪ್ರಕ್ರಿಯೆಯು ಭಾಗಶಃ ಪೂರ್ಣಗೊಂಡಿದೆ. ಆದರೆ, ಮ್ಯಾಜಿಸ್ಟೀರಿಯಲ್ ಸಹಿತ ಇನ್ನು ಕೆಲ ತನಿಖೆಗಳು ಬಾಕಿ ಉಳಿದಿವೆ. ಹೈಕೋರ್ಟ್ ನಿಗದಿಪಡಿಸಿದ ದಿನದೊಳಗೇ ಆರೋಪಪಟ್ಟಿ ಸಲ್ಲಿಕೆಗೆ ಸೂಚನೆ ಇದ್ದುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು (ಮಧ್ಯಂತರ) ತನಿಖಾಧಿಕಾರಿಗಳು ಮಾ.17ರಂದೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಎಂಟು ಚಾರ್ಜ್ಶೀಟ್ ಸಲ್ಲಿಕೆ: ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಚಾರ್ಜ್ಶೀಟ್ಗಳನ್ನು ನ್ಯಾಯಾಲಯಕ್ಕೆ ಮೂವರು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣ, ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ದಾಖಲಾದ ಮೂರು ಪ್ರಕರಣ ಸೇರಿದಂತೆ ಸಿಐಡಿ ತಂಡವು ಕೂಡ ತನ್ನ ಚಾರ್ಜ್ಶೀಟ್ವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ.
ಬಂದರ್ ಠಾಣಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಗೋವಿಂದರಾಜು, ಪಾಂಡೇಶ್ವರಕ್ಕೆ ಠಾಣಾ ಇನ್ಸ್ಪೆಕ್ಟರ್ ಲೋಕೇಶ್ ಎ.ಸಿ. ತನಿಖಾಧಿಕಾರಿಯಾಗಿದ್ದರೆ, ಸಿಐಡಿ ಎಸ್ಪಿ ರಾಹುಲ್ಕುಮಾರ್ ಷಹಾಪುರ್ವಾಡ್ ಸಿಐಡಿ ತಂಡದ ತನಿಖಾಧಿಕಾರಿಯಾಗಿದ್ದರು.
ಪ್ರಕರಣದ ಚಾರ್ಜ್ಶೀಟ್ನಲ್ಲಿ ಒಟ್ಟು 464 ಮಂದಿಯ ಹೆಸರನ್ನು ಆರೋಪಿಗಳನ್ನಾಗಿ ಪ್ರಸ್ತಾಪಿಸಲಾಗಿದೆ. ಬಂದರ್ ಠಾಣೆಯ ನಾಲ್ಕು ಪ್ರಕರಣಗಳ ಚಾರ್ಜ್ಶೀಟ್ನಲ್ಲಿ 313 ಮಂದಿ, ಪಾಂಡೇಶ್ವರ ಠಾಣೆಯ ಮೂರು ಪ್ರಕರಣಗಳಲ್ಲಿ 129 ಹಾಗೂ ಸಿಐಡಿ ತನಿಖಾಧಿಕಾರಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ 22 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ.
24 ಚಾರ್ಜ್ಶೀಟ್ ಸಲ್ಲಿಕೆಗೆ ಬಾಕಿ!: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮಧ್ಯಂತರ ಎಂಟು ಜಾರ್ಜ್ಶೀಟ್ ಸಲ್ಲಿಕೆಯಾಗಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತಾಲಯದ ವಿವಿಧ ಠಾಣೆಗಳಲ್ಲಿ ಒಟ್ಟು 32 ಎಫ್ಐಆರ್ಗಳು ದಾಖಲಾಗಿವೆ. ಈ ಪೈಕಿ ಕೇವಲ ಎಂಟು ಪ್ರಕರಣಗಳಲ್ಲಿ ಮಾತ್ರವೇ ತನಿಖಾಧಿಕಾರಿಗಳು ಚಾರ್ಜ್ಶೀಟ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನುಳಿದ ಪ್ರಕರಣಗಳ ಚಾರ್ಜ್ಶೀಟ್ ಸಲ್ಲಿಕೆಯಾಗುವುದು ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ವಿವರ: ಮಂಗಳೂರಿನಲ್ಲಿ 2019ರ ಡಿ.19ರಂದು ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟು, 9ಕ್ಕೂ ಹೆಚ್ಚು ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದರು. ಅಲ್ಲದೆ, ಲಾಠಿಚಾರ್ಜ್ನಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಸಂಘಟನೆಯೊಂದು ನಗರದ ನೆಹರೂ ಮೈದಾನದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು. ಈ ನಡುವೆ ಡಿ.18ರಂದು ಮಂಗಳೂರು ಪೊಲೀಸ್ ಆಯುಕ್ತರು ಪ್ರತಿಭಟನೆ ಮುಂದೂಡಲು ಸಂಘಟನೆಯ ಮುಖಂಡರ ಮನವೊಲಿಸಿದ್ದರು. ಅದೇ ದಿನದಂದು ರಾತ್ರಿ 9 ಗಂಟೆಯಿಂದ ಎರಡು ದಿನಗಳವರೆಗೆ 144 ಸೆಕ್ಷನ್ನನ್ನು ನಗರದಾದ್ಯಂತ ವಿಧಿಸಲಾಗಿತ್ತು. ಇದರ ಹೊರತಾಗಿಯೂ ಮರುದಿನ (ಡಿ.19) ನಗರದ ಸ್ಟೇಟ್ಬ್ಯಾಂಕ್ ಬಳಿ ಬೆಳಗ್ಗೆ ಸಣ್ಣ ಗುಂಪು ಜಮಾಯಿಸಿತ್ತು. ಇದನ್ನು ಚದುರಿಸಲು ಪೊಲೀಸರು ಮುಂದಾಗಿದ್ದರು. ಇದು ಲಾಠಿಜಾರ್ಜ್, ಅಶ್ರುವಾಯು, ರಬ್ಬರ್ ಗುಂಡು, ಗಾಳಿಯಲ್ಲಿ ಗುಂಡು ಹಾರಾಟಕ್ಕೆ ತಿರುಗಿತು. ಸಂಜೆಯಾಗುತ್ತಿದ್ದಂತೆಯೇ ನಡೆದ ಗೋಲಿಬಾರ್ನಲ್ಲಿ ಕಂದಕ್ ನಿವಾಸಿ ಅಬ್ದುಲ್ ಜಲೀಲ್ (42), ಕುದ್ರೋಳಿ ನಿವಾಸಿ ನೌಶಿನ್ (25) ಎಂಬವರು ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ (ಬಂದರ್), ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಸಹಿತ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಮಂಗಳೂರು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಹಲವು ಸಂಘಟನೆ, ಪಕ್ಷಗಳ ಒತ್ತಾಯದಿಂದಾಗಿ ರಾಜ್ಯ ಸರಕಾರವು ಸಿಐಡಿ, ಮ್ಯಾಜಿಸ್ಟೀರಿಯಲ್ ತನಿಖೆಗೆ ಸೂಚಿಸಿತು.
ಮ್ಯಾಜಿಸ್ಟೀರಿಯಲ್ ತನಿಖೆಯ ನೇತೃತ್ವವನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ವಹಿಸಲಾಗಿತ್ತು. ಈ ತನಿಖೆಯು ಭಾಗಶಃ ಪೂರ್ಣಗೊಂಡಿದೆ. ಕೊವೀಡ್ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆಯ ದಿನಾಂಕವನ್ನು ಮುಂದೂಡಲಾಗಿದೆ. ಸದ್ಯ ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಎಂಟು ಚಾರ್ಜ್ಶೀಟ್ ಸಲ್ಲಿಕೆಯಾಗಿವೆ.