ಉಡುಪಿ: ಇಂದು 4 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

ಉಡುಪಿ, ಜೂ.17: ಉಡುಪಿಯಲ್ಲಿ ಬುಧವಾರ ಮತ್ತೆ ನಾಲ್ವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನ ವೈರಸ್‌ಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ 1039ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಸೋಂಕು ಪತ್ತೆಯಾದವರಲ್ಲಿ 54 ವರ್ಷದ ಪುರುಷ, 16 ಮತ್ತು 9 ವರ್ಷ ಪ್ರಾಯದ ಬಾಲಕರು ಹಾಗೂ 22 ವರ್ಷ ಪ್ರಾಯದ ಯುವತಿ ಸೇರಿದ್ದಾರೆ. ಇವರಲ್ಲಿ ಮೊದಲ ಮೂವರು ಇತ್ತೀಚೆಗೆ ಮುಂಬೈಯಿಂದ ಬಂದವರಾದರೆ, ಯುವತಿ, ಜೂ.7ರಂದು ಪಾಸಿಟಿವ್ ಬಂದ ಮಣಿಪುರದ ಲ್ಯಾಬ್ ಟೆಕ್ನಿಷಿಯನ್‌ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದವರು ಹೇಳಿದರು.
ಉಡುಪಿ ಒಟ್ಟು 1039 ಪಾಸಿಟಿವ್ ಪ್ರಕರಣಗಳೊಂದಿಗೆ ಈಗಲೂ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. 1026 ಪಾಸಿಟಿವ್ ಕೇಸ್‌ಗಳೊಂದಿಗೆ ಕಲಬುರಗಿ ಎರಡನೇ, 865 ಪ್ರಕರಣಗಳೊಂದಿಗೆ ಯಾದಗಿರಿ ಮೂರನೇ ಹಾಗೂ 827 ಪಾಸಿಟಿವ್‌ನೊಂದಿಗೆ ಬೆಂಗಳೂರು ನಗರ ನಾಲ್ಕನೇ ಸ್ಥಾನದಲ್ಲಿವೆ.
23 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಇಂದು 23 ಮಂದಿ ಸೇರಿದಂತೆ ಒಟ್ಟು 908 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೀಗ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಒಟ್ಟು 130 ಮಂದಿ ಮಾತ್ರ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.
ದಿನದ ಮತ್ತೊಂದು ಒಳ್ಳೆಯ ಸುದ್ದಿ ಎಂದರೆ ಮುಂಬೈಯಿಂದ ಬಂದು ಜೂ.16ರಂದು ಪಾಸಿಟಿವ್ ಕಂಡುಬಂದ ಕಾರ್ಕಳ ಮೂಲದ 22ರ ಹರೆಯ ಗರ್ಭಿಣಿ ಯುವತಿ ನಿನ್ನೆ ರಾತ್ರಿ ಸಿಝೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸೌಖ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
14 ನೆಗೆಟಿವ್: ಬುಧವಾರ 4 ಪಾಸಿಟಿವ್‌ನೊಂದಿಗೆ 14 ಸ್ಯಾಂಪಲ್‌ಗಳು ನೆಗೆಟಿವ್ ಆಗಿ ಬಂದಿವೆ. ಇಂದು ಒಟ್ಟು 34 ಮಂದಿಯ ಗಂಟಲು ದ್ರವ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಸಂಪರ್ಕಿತರು ನಾಲ್ವರು, ಉಸಿರಾಟದ ತೊಂದರೆಯ ಮೂವರು, ಶೀತಜ್ವರ ದಿಂದ ಬಳಲುವ 6 ಮಂದಿ ಹಾಗೂ ಕೋವಿಡ್ ಹಾಟ್‌ಸ್ಪಾಟ್ ಪ್ರದೇಶದಿಂದ ಬಂದ 14 ಮಂದಿಯ ಸ್ಯಾಂಪ್ಗಳಿವೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 13,033 ಕ್ಕೇರಿದೆ. ಇವುಗಳಲ್ಲಿ ಈವರೆಗೆ 11,876 ನೆಗೆಟಿವ್, 1039 ಸ್ಯಾಂಪಲ್ ಪಾಸಿಟಿವ್ ಆಗಿವೆ. ಇನ್ನು ಒಟ್ಟು 118 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಬುಧವಾರ 5 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 13 ಮಂದಿ ಬಿಡುಗಡೆಗೊಂಡಿದ್ದು, 71 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 64 ಮಂದಿ ಸೇರಿದಂತೆ ಒಟ್ಟು 5585 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 655 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ಹೇಳಿದರು.







