ಮೂವರು ಅಧಿಕಾರಿಗಳ ನಿವಾಸ ಮೇಲೆ ಎಸಿಬಿ ದಾಳಿ ಪ್ರಕರಣ: ಅಪಾರ ಪ್ರಮಾಣದ ಅಸ್ತಿ ಪತ್ತೆ

ಬೆಂಗಳೂರು, ಜೂ.17: ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಮೂವರು ಸರಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದ ಪ್ರಕರಣ ಸಂಬಂಧ, ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ.
ಬೆಳಗಾವಿಯ ಕಾನೂನು ಮಾಪನಶಾಸ್ತ್ರ ತನಿಖಾ ದಳದ ಸಹಾಯ ನಿಯಂತ್ರಕ ಸುಭಾಷ ಸುರೇಂದ್ರ ಉಪ್ಪಾರ ಅವರ ಬಳಿ ಬೆಳಗಾವಿ ಜಿಲ್ಲೆಯ ರುಕ್ಮಿಣಿ ನಗರದಲ್ಲಿನ ಎರಡು ವಾಸದ ಮನೆ, 337 ಗ್ರಾಂ ಚಿನ್ನ, 1.511 ಕೆಜಿ ಬೆಳ್ಳಿ, ಎರಡು ಬೈಕ್, ವಿವಿಧ ಬ್ಯಾಂಕ್ ಗಳಲ್ಲಿ 51 ಲಕ್ಷ ರೂ. ಠೇವಣಿ ಹಾಗೂ 10 ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ವಿಜಯಪುರದ ಪ್ರಭಾರ ಭೂ ದಾಖಲೆಗಳ ಉಪ ನಿರ್ದೇಶಕ ಹಾಗೂ ಬಾಗಲಕೋಟೆ ಭೂ ದಾಖಲೆಗಳ ಉಪ ನಿರ್ದೇಶಕ ಗೋಪಾಲ ಎಲ್. ಮಾಲಗತ್ತಿ ಅವರ ಮನೆ ಮೇಲೆ ದಾಳಿ ನಡೆಸಿದಾಗ ಕೊಪ್ಪಳ ನಗರದಲ್ಲಿ 3 ವಾಸದ ಮನೆ, ಆರು ನಿವೇಶನ, 605 ಗ್ರಾಂ ಚಿನ್ನ, 658 ಗ್ರಾಂ ಬೆಳ್ಳಿ, ಎರಡು ಕಾರು, 2 ಬೈಕ್, 7.47 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಅದೇ ರೀತಿ, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ನಿವಾಸ ಮೇಲೆ ದಾಳಿ ನಡೆಸಿದಾಗ ಕಲಬುರಗಿ ನಗರದಲ್ಲಿ 1 ವಾಸದ ಮನೆ, 4 ನಿವೇಶನ, 14.35 ಎಕರೆ ಕೃಷಿ ಭೂಮಿ, ವಾಣಿಜ್ಯ ಸಂಕೀರ್ಣದಲ್ಲಿ ಒಂದು ವಾಣಿಜ್ಯ ಮಳಿಗೆ ಹಾಗೂ ಈ ಮಳಿಗೆಯಲ್ಲಿ 15 ಲಕ್ಷ ಬೆಲೆ ಬಾಳುವ ಹೋಂ ಅಪ್ಲೈಯನ್ಸ್‍ಸ್, ನಗದು 91 ಸಾವಿರ ನಗದು, ಮತ್ತು 15 ಲಕ್ಷ ಗೃಹೋಪಯೋಗಿ ವಸ್ತುಗಳು ಇರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಎಸಿಬಿ ತಿಳಿಸಿದೆ.







