ಕ್ವಾರಂಟೇನ್ ಮಾರ್ಗಸೂಚಿ ಮತ್ತೆ ಬದಲಾಗಲಿದೆ: ರಘುಪತಿ ಭಟ್

ಉಡುಪಿ, ಜೂ.17: ಮಹಾರಾಷ್ಟ್ರದಿಂದ ಬಂದವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೇನ್ ಕೈಬಿಟ್ಟು ಈ ಹಿಂದಿನ ಹೋಮ್ ಕ್ವಾರಂಟೇನ್ ವಿಧಿಸಿ, ಮನೆಯನ್ನು ಸೀಲ್‌ಡೌನ್ ಮಾಡುವ ಆದೇಶವನ್ನು ಜಾರಿಗೆ ತರುವಂತೆ ಮುಖ್ಯ ಮಂತ್ರಿ ಹಾಗೂ ಗೃಹಸಚಿವರಲ್ಲಿ ಮನವಿ ಮಾಡಲಾಗಿದ್ದು, ಸದ್ಯವೇ ಈ ಹೊಸ ಮಾರ್ಗಸೂಚಿ ಮತ್ತೆ ಬದಲಾಗಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ವತಿಯಿಂದ ಕೊರೋನಾ ವೈರಸ್ ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿಸಿ ಕೊಂಡಿರುವ ಸುಮಾರು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರದ 66 ಆಶಾ ಕಾರ್ಯಕರ್ತೆಯರಿಗೆ ತಲಾ 2500ರೂ. ಪ್ರೋತ್ಸಾಹ ಧನ, ಕಿಟ್ ಹಾಗೂ ವಾಸ್ಕ್ ವಿತರಿಸಿ ಅವರು ಮಾತನಾಡುತಿದ್ದರು.
ಮಳೆಗಾಲದಲ್ಲಿ ಸಾಂಸ್ಥಿಕ ಕ್ವಾರಂಟೇನ್ ವ್ಯವಸ್ಥೆ ಮಾಡಲು ಮತ್ತು ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಸಾಂಸ್ಥಿಕ ಕ್ವಾರಂಟೇನ್‌ನಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಸಾಂಸ್ಥಿಕ ಕ್ವಾರಂಟೇನ್ ವ್ಯವಸ್ಥೆಯನ್ನು ಕೈಬಿಡು ವಂತೆ ಸರಕಾಕ್ಕೆ ಮನವಿ ಮಾಡಲಾಗಿದೆ ಎಂದರು.
ಕೊರೋನ ಲಾಕ್‌ಡೌನ್ ನಮಗೆ ಸಾಕಷ್ಟು ಜೀವನ ಪಾಠಗಳನ್ನು ಕಲಿಸಿ ಕೊಟ್ಟಿದೆ. ಕೊರೋನ ಸಂದರ್ಭದಲ್ಲಿ ಆಶಾ ಕಾರ್ಯಕರ್ತರ ಕಾರ್ಯ ವನ್ನು ಸಮಾಜ ಗುರುತಿಸಿದೆ. ಇದರಿಂದ ಆಶಾ ಕಾರ್ಯಕರ್ತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಅದೇ ರೀತಿ ಸಾಕಷ್ಟು ಸವಾಲು ಕೂಡ ಇರಲಿದೆ. ಹೋಮ್ ಕ್ವಾರಂಟೇನ್ ಸಂದರ್ಭ ಸೀಲ್‌ಡೌನ್ ಆಗುವ ಮನೆಗಳ ಬಗ್ಗೆ ನಿಗಾ ವಹಿಸಿ, ಈ ರೋಗ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವ ಬಹಳ ದೊಡ್ಡ ಹೊಣೆಗಾರಿಕೆ ಆಾ ಕಾರ್ಯಕರ್ತರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಶಾ ಮಾರ್ಗದರ್ಶಕಿ ರೀಟಾ ರೋಸಿ ರೇಗೊ, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಶರ್ಮಿಳಾ, ಜಯಂತಿ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ರೂಪಾ, ಸರಸ್ವತಿ, ಮಣಿಪಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಬಲ್ ಸಿಂಥಿಯಾ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಗಣೇಶ್ ಆರ್., ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಎಸ್ ವಂದಿಸಿದರು. ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.







