ಬಿಬಿಎಂಪಿ ಅಧಿಕಾರಿಯಿಂದ ಕಿರುಕುಳ ಆರೋಪ; ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಜೂ.17: ಬಿಬಿಎಂಪಿ ಮಹಿಳಾ ಅಧಿಕಾರಿಯೊಬ್ಬರು ಕಿರುಕುಳ ನೀಡುತ್ತಾರೆಂದು ಆರೋಪಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ ಗಿರೀಶ್(36) ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಅಕೌಂಟ್ ಸೂಪರಿಂಟೆಂಡೆಂಟ್‍ರೊಬ್ಬರ ಬಳಿ ಜಯನಗರ ಪಾರ್ಕ್ ನಿರ್ವಹಣೆಯ ಗುತ್ತಿಗೆ ನೀಡುವಂತೆ ಗಿರೀಶ್ ಕೇಳಿದ್ದರು. ಗುತ್ತಿಗೆ ಕಾಮಗಾರಿಯನ್ನು ನೀಡಲು ಹಣದ ಬೇಡಿಕೆ ಇಟ್ಟಿದ್ದರು ಅದಕ್ಕಾಗಿ ಆತ ತನ್ನ ಕಾರಿನ ದಾಖಲೆಗಳನ್ನು ನೀಡಿದ್ದ. ಆದರೆ, ಕಳೆದ ಒಂದು ವಾರದಿಂದ ಅಕೌಂಟ್ ಸೂಪರಿಂಟೆಂಡೆಂಟ್ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಣ ನೀಡಲು ನಿರಾಕರಿಸಿದ್ದಕ್ಕೆ ಗಿರೀಶ್ ವಿರುದ್ದ ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಆರೋಪವಿದೆ. ಇದರಿಂದ ಮಾನಸಿಕ ಹಿಂಸೆ ತಾಳಲಾರದೆ ಗುತ್ತಿಗೆದಾರ ಕಾರಿನಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





