ಸಾರಿಗೆ ನೌಕರರ ಜೂನ್ ತಿಂಗಳ ವೇತನದ ಅರ್ಧಭಾಗ ಸರಕಾರ ಪಾವತಿಸಲಿದೆ: ಲಕ್ಷ್ಮಣ ಸವದಿ

ಬಾಗಲಕೋಟೆ, ಜೂ.17: ಕೋವಿಡ್-19 ಹಿನ್ನೆಲೆಯಲ್ಲಿ ನಷ್ಟಕ್ಕೆ ಸಿಲುಕಿರುವ ಕೆಎಸ್ಸಾರ್ಟಿಸಿಯ ನಾಲ್ಕು ನಿಗಮಗಳ ನೌಕರರ ಜೂನ್ ತಿಂಗಳ ವೇತನದ ಅರ್ಧ ಭಾಗವನ್ನು ರಾಜ್ಯ ಸರಕಾರ ಪಾವತಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿನ ಭಯದಿಂದಾಗಿ ಪ್ರಯಾಣಿಕರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಲು ಅಂಜುತ್ತಿದ್ದಾರೆ. ಹಾಗೂ ಬಸ್‍ಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಪ್ರತಿ ಬಸ್‍ನಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಯಾಣಿಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇವೆಲ್ಲಾ ಕಾರಣಗಳಿಂದಾಗಿ ಸಾರಿಗೆ ಸಂಸ್ಥೆಗಳು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿವೆ ಎಂದರು.
ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ 2,300ಕೋಟಿ ರೂ.ನಷ್ಟವಾಗಿದೆ. ಸಾರಿಗೆ ಸಂಸ್ಥೆಗಳ ದೈನಂದಿನ ವಹಿವಾಟು ಸಹಜ ಸ್ಥಿತಿಗೆ ಬರುವವರೆಗೆ ರಾಜ್ಯ ಸರಕಾರದ ನೆರವು ಪಡೆಯುವ ನಿಟ್ಟಿನಲ್ಲಿ ವಿಶೇಷ ನಿಧಿ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.





