ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಕೋವಿಡ್-19 ಸಹಾಯವಾಣಿ ಆರಂಭ
ಬೆಂಗಳೂರು, ಜೂ.17: ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಕೋವಿಡ್-19 ಅವಧಿಯಲ್ಲಿ ಸಾರ್ವಜನಿಕರು ಕಚೇರಿಗೆ ನೇರವಾಗಿ ಬಂದು ದೂರುಗಳನ್ನು ದಾಖಲಿಸಲು ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ/ಲೈಂಗಿಕ ಕಿರುಕುಳ/ಶೋಷಣೆ, ಮಕ್ಕಳ ಸಾಗಾಟಣೆ/ಮಕ್ಕಳ ಮಾರಾಟ/ಮಕ್ಕಳು ಕಾಣೆಯಾಗುವುದು ಮತ್ತು ಶಾಲೆಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ಸೂಕ್ತ ಮಾರ್ಗದರ್ಶನ, ಆಪ್ತಸಮಾಲೋಚನೆ ಹಾಗೂ ತ್ವರಿತ ಗತಿಯಲ್ಲಿ ಪರಿಹಾರ ಒದಗಿಸಲು ‘ಕೋವಿಡ್-19 ಸಹಾಯವಾಣಿಯನ್ನು’ ಆರಂಭಿಸಿದೆ.
ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 080-47181177 ಅನ್ನು ಸಂಪರ್ಕಿಸಬಹುದಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗವು Commissions for Protection of child Rights Act-2005ರ ಸೆಕ್ಷನ್ 13 ರನ್ವಯ ದೂರುಗಳನ್ನು ವಿಚಾರಣೆಗೊಳಪಡಿಸುವ ಹಾಗೂ ಸೆಕ್ಷನ್ 14 ರಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.





