ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಿ: ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ಒತ್ತಾಯ

ಮಡಿಕೇರಿ, ಜೂ.17: ಪ್ರಾಕೃತಿಕ ವಿಕೋಪ ಸೇರಿದಂತೆ ಕಳೆದ ಎರಡು ದಶಕಗಳಿಂದ ಹತ್ತು ಹಲವು ಸಮಸ್ಯೆಗಳಿಗೆ ತುತ್ತಾಗಿರುವ ಕೊಡಗಿನ ಸಣ್ಣ ಬೆಳೆಗಾರರನ್ನು ಬಡತನ ರೇಖೆಗಿಂತ ಕೆಳಗಿರುವವರ (ಬಿಪಿಎಲ್) ಪಟ್ಟಿಗೆ ಸೇರಿಸಬೇಕೆಂದು ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.
ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಸರಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯ ಬೆಳೆಗಾರರು ಸತತ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವುದರೊಂದಿಗೆ ಕಳೆದ ಎರಡು ದಶಕದಿಂದ ಅತಿವೃಷ್ಟಿ, ಅನಾವೃಷ್ಟಿ, ವನ್ಯಪ್ರಾಣಿಗಳ ಹಾವಳಿಯಿಂದ ನಿರಂತರ ಬೆಳೆ ನಷ್ಟ, ಅಲ್ಲದೆ ಬೆಲೆ ಕುಸಿತ, ಉತ್ಪಾದನಾ ವೆಚ್ಚ ಹೆಚ್ಚಳ ಸಮಸ್ಯೆಯಿಂದ ನಲುಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಿ ಸರಕಾರದ ವಿವಿಧ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ಕಾಫಿ ಮತ್ತು ಇತರ ಬೆಳೆಗಾರರ ಆದಾಯ ತೀವ್ರವಾಗಿ ಕುಸಿದಿದ್ದು, ಆದಾಯ ಪ್ರಮಾಣ ಪತ್ರ ನೀಡುವಾಗ ಇದನ್ನು ಕಂದಾಯ ಇಲಾಖೆ ಗಮನಕ್ಕೆ ತೆಗೆದುಕೊಳ್ಳಬೇಕು. ತಪ್ಪು ಕಲ್ಪನೆಯಿಂದ ಹೆಚ್ಚು ಆದಾಯ ಇದೆ ಎಂದು ನೀಡುತ್ತಿರುವ ಆದಾಯ ದೃಢೀಕರಣ ಪತ್ರದಿಂದ ಸಣ್ಣ ಬೆಳೆಗಾರರು ಬಿಪಿಎಲ್ ಪಟ್ಟಿಗೆ ಸೇರುವಲ್ಲಿ ವಂಚಿತರಾಗುವಂತಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಕಂದಾಯ ಅದಾಲತ್ ನಡೆಸಿ: ಕಂದಾಯ ಇಲಾಖೆಯಲ್ಲಿ ವಿಲೇವಾರಿ ಆಗದೆ ಬಾಕಿ ಇರುವ ಕಡತಗಳ ವಿಲೇವಾರಿಗೆ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತನ್ನು ನಡೆಸಬೇಕು. ಜಿಲ್ಲೆಯ ಬೆಳೆಗಾರರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಕೃಷಿ ಸಾಲ ಪಡೆಯಲು ಬ್ಯಾಂಕಿನಲ್ಲಿ ವಿಧಿಸಿರುವ ಸಿಬಿಲ್ ಅರ್ಹತೆಯನ್ನು ತೆಗೆಯಬೇಕು. ಕೋವಿಡ್-19 ಸಂಕಷ್ಟದಲ್ಲಿರುವವರಿಗೆ ಕೇಂದ್ರ ಸರಕಾರ ಪ್ರಕಟಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಕಾಫಿ ಬೆಳೆಗಾರರಿಗೂ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂದಿತು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಕಾರ್ಯದರ್ಶಿ ಬೊಳ್ಳೇರ ರಾಜ ಸುಬ್ಬಯ್ಯ, ಖಜಾಂಚಿ ಮಾಣಿರ ವಿಜಯ ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ಆಡಳಿತ ಮಂಡಳಿಯ ಚೋಡುಮಾಡ ಶರಿನ್ ಸುಬ್ಬಯ್ಯ, ಮಾಪಂಗಡ ಯಮುನಾ ಚಂಗಪ್ಪ, ಆಶಾ ಜೇಮ್ಸ್, ತೀತಿರ ಊರ್ಮಿಳಾ ಸೋಮಯ್ಯ, ಕರ್ತಮಾಡ ನಂದ, ಕಾಳಿಮಾಡ ರಶಿಕ, ಕಾಳಿಮಾಡ ತ್ಮು ಮುತ್ತಣ್ಣ ಮತ್ತಿತರರಿದ್ದರು.







