ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕೆ ಭಾರತ ಆಯ್ಕೆ

ವಿಶ್ವಸಂಸ್ಥೆ,ಜೂ.18: ಭಾರತವು 2021ರಿಂದ 2022ರವರೆಗಿನ ದ್ವೈವಾರ್ಷಿಕ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಖಾಯಂ ಅಲ್ಲದ ಸದಸ್ಯತ್ವವನ್ನು ಗೆದ್ದುಕೊಂಡಿದೆ. ತನ್ಮೂಲಕ ಇಡೀ ವಿಶ್ವವೇ ಕೊರೋನ ವೈರಸ್ ಮುಷ್ಟಿಯಲ್ಲಿ ನಲುಗಿರುವಾಗ ಮತ್ತು ಬಹುಪಕ್ಷೀಯ ವಾದವು ಒತ್ತಡಕ್ಕೆ ಸಿಲುಕಿರುವಾಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಉಪಸ್ಥಿತಿಗೆ ಇನ್ನಷ್ಟು ಉತ್ತೇಜನ ದೊರಕಿದೆ.
ಬುಧವಾರ ನಡೆದ ಚುನಾವಣೆಯಲ್ಲಿ 193 ಸದಸ್ಯಬಲದ ಸಾಮಾನ್ಯ ಸಭೆಯಲ್ಲಿ 184 ಮತಗಳನ್ನು ಭಾರತವು ಗೆದ್ದುಕೊಂಡಿದೆ. ಆಯ್ಕೆಗೆ 128 ಮತಗಳ ಮೂರನೇ ಎರಡರಷ್ಟು ಬಹುಮತ ಅಗತ್ಯವಾಗಿತ್ತು. 15 ಸದಸ್ಯರ ಭದ್ರತಾ ಮಂಡಳಿಯಲ್ಲಿ ಭಾರತದ ಅಧಿಕಾರಾವಧಿ 2021,ಜ.1ರಿಂದ ಆರಂಭಗೊಳ್ಳಲಿದ್ದು,ಇದು ಅದರ ಎಂಟನೇ ಅಧಿಕಾರಾವಧಿಯಾಗಲಿದೆ.
‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತದ ಸದಸ್ಯತ್ವಕ್ಕೆ ಜಾಗತಿಕ ಸಮುದಾಯದ ಭಾರೀ ಬೆಂಬಲಕ್ಕೆ ಆಭಾರಿಯಾಗಿದ್ದೇವೆ. ಜಾಗತಿಕ ಶಾಂತಿ, ಭದ್ರತೆ ಮತ್ತು ಸಮಾನತೆಗಾಗಿ ಎಲ್ಲ ಸದಸ್ಯ ರಾಷ್ಟ್ರಗಳೊಂದಿಗೆ ಸೇರಿ ಭಾರತವು ಶ್ರಮಿಸಲಿದೆ ’ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟಿಸಿದ್ದಾರೆ.
ಯುಎನ್‌ಎಸ್‌ಸಿಯ ಇತರ ನಾಲ್ಕು ತಾತ್ಕಾಲಿಕ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆದಿದ್ದು, ಮೆಕ್ಸಿಕೋ, ನಾರ್ವೆ, ಐರ್ಲೆಂಡ್ ಮತ್ತು ಕೆನಡಾ ಆಯ್ಕೆಯಾಗಿವೆ. ಕೆನ್ಯಾ ಮತ್ತು ದಿಜಿಬೌಟಿ ಮೂರನೇ ಎರಡರಷ್ಟು ಮತಗಳನ್ನು ಗಳಿಸುವಲ್ಲಿ ವಿಫಲಗೊಂಡಿದ್ದು, ಇನ್ನೊಂದು ಸುತ್ತಿನ ಮತದಾನವನ್ನು ಎದುರಿಸಲಿವೆ.
ಏಷ್ಯಾ ಪೆಸಿಫಿಕ್ ದೇಶಗಳಿಗೆ ಹಂಚಿಕೆಯಾಗಿದ್ದ ಸ್ಥಾನಕ್ಕೆ ಭಾರತದ ಅವಿರೋಧ ಗೆಲುವು ನಿರೀಕ್ಷಿತವಾಗಿದ್ದರೂ,ಈ ಅವಕಾಶ ಕೈತಪ್ಪದಂತೆ ನೋಡಿಕೊಳ್ಳಲು ಸರಕಾರವು ಯಾವುದೇ ಪ್ರಯತ್ನಗಳನ್ನು ಬಾಕಿಯಿರಿಸಿರಲಿಲ್ಲ. ಪ್ರಧಾನಿ ಮೋದಿ ಅವರು 60ಕ್ಕೂ ಅಧಿಕ ದೇಶಗಳ ಮುಖ್ಯಸ್ಥರನ್ನು ಸಂಪರ್ಕಿಸಿದ್ದರು ಮತ್ತು ಸಾರ್ಕ್‌ನಂತಹ ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಮಾತುಕತೆ ನಡೆಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಇತರ ದೇಶಗಳ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
‘ನಿರ್ಣಾಯಕ ಕಾಲಘಟ್ಟದಲ್ಲಿ ಭಾರತವು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗುತ್ತಿದೆ ಮತ್ತು ಕೋವಿಡ್‌ನಲ್ಲಿ ಹಾಗೂ ಕೋವಿಡ್ ನಂತರದ ವಿಶ್ವದಲ್ಲಿ ನಾಯಕತ್ವವನ್ನು ಮತ್ತು ಸುಧಾರಿತ ಬಹುಪಕ್ಷೀಯ ವ್ಯವಸ್ಥೆಗಾಗಿ ಹೊಸ ದೃಷ್ಟಿಕೋನ ನೀಡುವುದನ್ನು ಮುಂದುವರಿಸಲಿದೆ ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್.ಗುರುಮೂರ್ತಿ ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಯುಎನ್‌ಎಸ್‌ಸಿಯ ನಾಲ್ಕು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ (ಚೀನಾ ಐದನೇ ರಾಷ್ಟ್ರ) ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದ ಸದಸ್ಯತ್ವ ಗೆಲುವಿಗಾಗಿ ಅಭಿನಂದನಾ ಸಂದೇಶಗಳನ್ನು ಕಳುಹಿಸಿವೆ.







