ಉಡುಪಿ: ಸೂಚನಾ ಫಲಕದ ಕಂಬಕ್ಕೆ ಪಿಕ್‌ಅಪ್ ವಾಹನ ಢಿಕ್ಕಿ; ತರಕಾರಿ ವ್ಯಾಪಾರಿಗಳಿಬ್ಬರು ಮೃತ್ಯು

ಉಡುಪಿ, ಜೂ.18: ತರಕಾರಿ ಖರೀದಿಸಲು ಆದಿಉಡುಪಿ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದ ಮಹೇಂದ್ರ ಪಿಕ್‌ಅಪ್ ವಾಹನವೊಂದು ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಸೂಚನ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸಹಿತ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ
ಮೃತರನ್ನು ಕುಂದಾಪುರ ಮೂರುಕೈ ನಿವಾಸಿ, ಚಾಲಕ ದಿನೇಶ್ (37) ಹಾಗೂ ಇವರ ನೆರೆಮನೆಯ ಮಂಜುನಾಥ್(26) ಎಂದು ಗುರುತಿಸಲಾಗಿದೆ.
ದಿನೇಶ್ ಕೆಲವು ಸಮಯದಿಂದ ತನ್ನ ವಾಹನದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದು, ಅದಕ್ಕಾಗಿ ರಖಂ ದರದಲ್ಲಿ ತರಕಾರಿ ಖರೀದಿಸಲು ಮನೆಯಿಂದ ಆದಿಉಡುಪಿ ಎಪಿಎಂಸಿ ಮಾರುಕಟ್ಟೆಗೆ ತನ್ನೊಂದಿಗೆ ಕೆಲಸ ಮಾಡುವ ಮಂಜು ನಾಥ್ ಜೊತೆ ಹೋಗುತ್ತಿದ್ದರೆನ್ನಲಾಗಿದೆ.
ಈ ವೇಳೆ ನಿದ್ದೆಗಣ್ಣಿನಿಂದ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿ ಹಾಕಲಾದ ಸೂಚನ ಫಲಕದ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ವಾಹನ ಎದುರಿನ ಭಾಗ ಸಂಪೂರ್ಣ ಜಖಂಗೊಂಡಿದ್ದು, ಇದರ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇವರ ಪೈಕಿ ದಿನೇಶ್ ಸ್ಥಳದಲ್ಲಿಯೇ ಮೃತಪಟ್ಟರೆ, ಮಂಜುನಾಥ್ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ದಿನೇಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮಂಜುನಾಥ್ ಅವಿವಾಹಿತರಾಗಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







