ಭಾರತದಲ್ಲಿ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ನೇರ ಪ್ರಸಾರ ರದ್ದುಗೊಳಿಸಿದ ಚೀನೀ ಕಂಪೆನಿ ‘ಒಪ್ಪೋ’

ಹೊಸದಿಲ್ಲಿ : ಲಡಾಖ್ ನಲ್ಲಿ ಭಾರತ ಮತ್ತು ಚೀನಾದ ಸೇನಾ ಪಡೆಗಳ ನಡುವಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬೆನ್ನಿಗೇ ಭಾರತದಲ್ಲಿ ಚೀನೀ ಉತ್ಪನ್ನಗಳ ಬಹಿಷ್ಕಾರಕ್ಕೆ ಹೆಚ್ಚುತ್ತಿದೆ. ಈ ನಡುವೆ ಚೀನಾ ಮೂಲದ ಒಪ್ಪೋ ಕಂಪೆನಿ ತನ್ನ ಪ್ರಮುಖ ಸ್ಮಾರ್ಟ್‍ಫೋನ್ ನ ಆನ್ಲೈನ್ ಅನಾವರಣ ಕಾರ್ಯಕ್ರಮವನ್ನು ಬುಧವಾರ ರದ್ದುಗೊಳಿಸಿದೆ.
ಭಾರತದಲ್ಲಿ ಫೋನ್ ಅಸೆಂಬ್ಲಿ ಸ್ಥಾವರ ಹೊಂದಿರುವ ಒಪ್ಪೋ ತನ್ನ ಹೊಸ ಫೈಂಡ್ ಎಕ್ಸ್2 ಸ್ಮಾರ್ಟ್ ಫೋನ್ ಮಾಡೆಲ್ ಗಳನ್ನು ಬುಧವಾರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅನಾವರಣಗೊಳಿಸುವುದಾಗಿ ಹೇಳಿತ್ತು. ಆದರೆ ಸ್ಥಳೀಯ ಕಾಲಮಾನ ಸಂಜೆ 4 ಗಂಟೆಗೆ ಈ ನೇರ ಪ್ರಸಾರದ ಯುಟ್ಯೂಬ್ ಲಿಂಕ್ ಲಭ್ಯವಿರಲಿಲ್ಲ.
ಇದರ ಬದಲು ಕಂಪೆನಿ ಮುಂಚಿತವಾಗಿ ರೆಕಾರ್ಡ್ ಮಾಡಲ್ಪಟ್ಟ 20 ನಿಮಷಗಳ ವೀಡಿಯೋವೊಂದನ್ನು ಅಪ್ ಲೋಡ್ ಮಾಡಿದೆಯಲ್ಲದೆ, ಅದರಲ್ಲಿ ಕೊರೋನವೈರಸ್ ಸೋಂಕು ತಡೆಗೆ ಭಾರತೀಯ ಪ್ರಾಧಿಕಾರಗಳೊಂದಿಗೆ ಒಪ್ಪೋ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನೂ ವಿವರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಪೆನಿ ವಿರುದ್ಧ ಆಕ್ರೋಶ ಮೂಡುವುದನ್ನು ತಡೆಯಲು ನೇರ ಪ್ರಸಾರ ಕಾರ್ಯಕ್ರಮವನ್ನು ಕಂಪೆನಿ ರದ್ದುಪಡಿಸಿದೆ ಎಂದೇ ತಿಳಿಯಲಾಗಿದೆ.





