ಸಫೂರ ಝರ್ಗರ್ ಜಾಮೀನು ಅರ್ಜಿ: ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ಸಿಎಎ ವಿರೋಧಿ ಹೋರಾಟಗಾರ್ತಿ ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ, ಗರ್ಭಿಣಿಯಾಗಿರುವ ಸಫೂರ ಝರ್ಗರ್ ಅವರ ವಕೀಲರು ಇಂದು ದಿಲ್ಲಿ ಹೈಕೋರ್ಟ್‍ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಜೂನ್ 4ರ ಆದೇಶವನ್ನು ಸಫೂರ ಅವರ ಜಾಮೀನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ್ದು, ವರದಿ ಸಲ್ಲಿಸುವಂತೆ ತಿಳಿಸಿದೆ.
ಎಪ್ರಿಲ್ 10ರಂದು ಸಫೂರ ಅವರನ್ನು ಬಂಧಿಸಲಾಗಿತ್ತಲ್ಲದೆ, ನಂತರ ಆಕೆಯ ವಿರುದ್ಧ ಕಠಿಣ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನು ಹೇರಲಾಗಿತ್ತು. ಆಕೆಗಾಗಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿರುವುದು ಇದು ನಾಲ್ಕನೇ ಬಾರಿ. ಮೊದಲ ಬಾರಿ ಎಪ್ರಿಲ್ 18ರಂದು ಜಾಮೀನು ಅರ್ಜಿ ಸಲ್ಲಿಸಿದಾಗ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆ ಹೇರಲಾಗಿರಲಿಲ್ಲ. ಆದರೂ ಕಾಯಿದೆ ಹೇರಿದ ನಂತರ ಎಪ್ರಿಲ್ 21ರಂದು ಮೊದಲ ಅಪೀಲು ತಿರಸ್ಕೃತಗೊಂಡಿತ್ತು. ಮೇ 2ರಂದು ಜಾಮೀನು ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯದಲ್ಲಿ ವಾದವಿವಾದಗಳ ನಂತರ ಅದನ್ನು ವಾಪಸ್ ಪಡೆಯಲಾಗಿತ್ತು. ಮೂರನೇ ಜಾಮೀನು ಅರ್ಜಿ ಜೂನ್ 4ರಂದು ತಿರಸ್ಕೃತಗೊಂಡಿತ್ತು.







