ಉಡುಪಿ: ಬೃಹತ್ ಗಾತ್ರದ ಹತ್ತಿ ಬಟ್ಟೆಯ ಮಾಸ್ಕ್ ಪ್ರದರ್ಶನ

ಉಡುಪಿ, ಜೂ.18: ಮಾಸ್ಕ್ ಧರಿಸುವ ಮತ್ತು ಸುರಕ್ಷಿತ ಅಂತರ ಕಾಪಾಡುವ ಬಗ್ಗೆ ಜನರಿಗೆ ಅರಿವು ಮೂಡಿಸಿದರೆ ಮುಂದೆ ಕೋವಿಡ್ -19 ಸಮಾಜಕ್ಕೆ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಹೇಳಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ನಗರದ ಮಾರುಥಿ ವಿಥೀಕಾದಲ್ಲಿ ಗುರುವಾರ ಆಯೋಜಿಸಲಾದ ಕೊರೋನಾ ನಿಯಂತ್ರಣ ಅಭಿಯಾನ ಮತ್ತು ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಾಯಿರಾಂ ಬಟ್ಟೆ ಮಳಿಗೆಯವರು ಉಚಿತವಾಗಿ ಒದಗಿಸಿದ ಹತ್ತಿ ಬಟ್ಟೆ ಬಳಸಿಕೊಂಡು, ಕ್ಲಾಸಿಕ್ ಟಚ್ ಟೈಲರ್ಸ್ ತಂಡದವರು ತಯಾರಿಸಿದ 6 ಅಡಿ ಉದ್ದ ಮತ್ತು 5 ಅಡಿ ಅಗಲದ ಬೃಹತ್ ಗಾತ್ರ ಮಾಸ್ಕ್‌ನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಕೋವಿಡ್ ನೊಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಶಕ್ತಿವೇಲು ಅತಿಥಿಗಳಾ ಗಿದ್ದರು. ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತವಿಕವಾಗಿ ಮಾತ ನಾಡಿದರು. ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು. ರಾಜೇಶ ಶೆಟ್ಟಿ, ರಾಘವೇಂದ್ರ ಕರ್ವಾಲು ಮೊದಲಾದವರು ಉಪಸ್ಥಿತರಿದ್ದರು.







