ಬಿವಿಟಿಯಿಂದ ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಮಾಹಿತಿ ಪೋಸ್ಟರ್

ಮಣಿಪಾಲ, ಜೂ.18: ಮುಂದಿನ ಜೂ.25ರಿಂದ ಪ್ರಾರಂಭಗೊಳ್ಳುವ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಪರೀಕ್ಷಾ ಅವಧಿಯಲ್ಲಿ ಅನುಸರಿಸಬೇಕಾದ ವಿವಿಧ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ವಿವರಗಳನ್ನು ಒಳಗೊಂಡ ಪೋಸ್ಟರನ್ನು ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ನೀಡುವ ಸಲುವಾಗಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಶೇಷಶಯನ ಕಾರಿಂಜ ಅವರಿಗೆ ಬುಧವಾರ ಹಸ್ತಾಂತರಿಸಲಾಯಿತು.
ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ (ಬಿವಿಟಿ) ಮಾಹಿತಿಗಳನ್ನೊಳ ಗೊಂಡ ಪೋಸ್ಟರ್‌ನ್ನು ಸಿದ್ಧಪಡಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ವಿಷಯ ಪರೀಕ್ಷಕರು ಉಪಸ್ಥಿತರಿದ್ದರು.
ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮಿ ಬಾಯಿ ಈ ಸಂದರ್ಭದಲ್ಲಿ ಮಾತನಾಡಿ, ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜಾಗೃತರಾಗಿರ ಬೇಕು ಎಂದು ತಿಳಿಸಿ ವಿದ್ಯಾರ್ಥಿಗಳು ಭಯ ಪಡದೇ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರುವಂತೆ ಕರೆ ನೀಡಿ ಶುಭ ಹಾರೈಸಿದರು. ಬಿವಿಟಿ ಕಾರ್ಯಕ್ರಮಸಂಯೋಜಕಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.





