ಚಿರಂಜೀವಿ ಸರ್ಜಾ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಜೂ.18: ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ನಿಧನ ಹಿನ್ನೆಲೆ ಪಾರ್ಥಿವ ಶರೀರ ದರ್ಶನ ವೇಳೆ ಸುರಕ್ಷಿತ ಅಂತರ ಕಾಪಾಡಿಕೊಳ್ಳದ ಆರೋಪದಡಿ ಇಲ್ಲಿನ ಜಯನಗರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ 59 ಮಂದಿ ವಿರುದ್ಧ ಎನ್‍ಡಿಎಂಎ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಚಿತ್ರನಟ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳ ಕೋರಿಕೆ ಕಾರಣದಿಂದಾಗಿ ಕೆಲ ನಿಯಮಗಳನ್ನು ವಿಧಿಸಿ ಅಂತಿಮ ದರ್ಶನಕ್ಕೆ ಅನುಮತಿ ನೀಡಿದ್ದರು. ಆದರೆ, ಪೊಲೀಸರು ವಿಧಿಸಿದ ನಿಯಮವನ್ನು ಸರ್ಜಾ ಅಭಿಮಾನಿಗಳು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 59 ಪ್ರಕರಣ ದಾಖಲಾಗಿವೆ ಎಂದು ತಿಳಿದುಬಂದಿದೆ.
ಜತೆಗೆ ಸರ್ಜಾ ಕುಟುಂಬದ ಕೆಲ ಸದಸ್ಯರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ನಟ ಚಿರಂಜೀವಿ ಸರ್ಜಾ ಅವರು ಜೂ.7 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಜೂ.8ರಂದು ನೆಲಗುಳಿಯಲ್ಲಿರುವ ಸರ್ಜಾ ಫಾರ್ಮ್‍ಹೌಸ್‍ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.





