ಎಚ್.ವಿಶ್ವನಾಥ್ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡ್: ಸಿದ್ದರಾಮಯ್ಯ

ಬೆಂಗಳೂರು, ಜೂ. 18: 'ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೂ ನಾನೇ ಹೈಕಮಾಂಡ್' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನನಗೆ ವಿಧಾನ ಪರಿಷತ್ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಾರಣ' ಎಂಬ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆಗೆ ಮೇಲಿನಂತೆ ತಿರುಗೇಟು ನೀಡಿದರು.
'ಎಚ್.ವಿಶ್ವನಾಥ್ ಅವರ ಪ್ರಕಾರ, ಬಿಜೆಪಿಗೂ ನಾನೇ ಹೈಕಮಾಂಡ್. ಆ ಪಕ್ಷದವರು ನಾನು ಹೇಳಿದ ವ್ಯಕ್ತಿಗೆ ಟಿಕೆಟ್ ಕೊಡುತ್ತಾರೆ ಎನ್ನುವಂತೆ ಆಯಿತು' ಎಂದು ಸಿದ್ದರಾಮಯ್ಯ, ವಿಶ್ವನಾಥ್ ವಿರುದ್ಧ ಟೀಕಿಸಿದರು.
ಮೇಲ್ಮನೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ವಿಶ್ವನಾಥ್ ಅವರನ್ನು ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಬಿಜೆಪಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಪ್ರತಿಕ್ರಿಯೆ ನೀಡಿದ್ದ ಎಚ್.ವಿಶ್ವನಾಥ್, `ನನಗೆ ಟಿಕೆಟ್ ತಪ್ಪಿಸುವಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕೈವಾಡವಿದೆ. ಮೂರು ದಿನಗಳಲ್ಲಿ ಇದನ್ನು ಬಹಿರಂಗಪಡಿಸುತ್ತೇನೆ' ಎಂದು ಹೇಳಿಕೆ ನೀಡಿದ್ದರು.





