ರಾಷ್ಟ್ರದ ಸಾರ್ವಭೌಮತೆ ಉಲ್ಲಂಘಿಸಲು ಯಾವ ಶಕ್ತಿಗೂ ಅವಕಾಶ ನೀಡಬಾರದು: ಎಸ್‍ಡಿಪಿಐ
ಹೊಸದಿಲ್ಲಿ, ಜೂ.18: ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಸೋಮವಾರ ಭಾರತೀಯ ಸೇನೆಯ 20 ಮಂದಿ ಸೈನಿಕರು ಹುತಾತ್ಮರಾಗಿರುವುದಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‍ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಸಂತ್ರಸ್ತ ಕುಟುಂಬಗಳಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ಆದರೆ ಗಡಿಯಲ್ಲಿ 1975 ರಲ್ಲಿ ನಾಲ್ಕು ಅಸ್ಸಾಂ ರೈಫಲ್ಸ್ ಸೈನಿಕರು ಹೊಂಚುದಾಳಿಯಿಂದ ಕೊಲ್ಲಲ್ಪಟ್ಟ ನಂತರ ಕಳೆದ ನಲವತ್ತೈದು ವರ್ಷಗಳಿಂದ ಯಾವುದೇ ಸಾವುನೋವು ಸಂಭವಿಸಿರಲಿಲ್ಲ. ಆದುದರಿಂದ, ಈ ಧೀರ ಸೈನಿಕರ ಪ್ರಾಣಹಾನಿ ದೇಶಕ್ಕೆ ಒಂದು ದೊಡ್ಡ ಆಘಾತವಾಗಿದೆ ಎಂದು ಫೈಝಿ ಹೇಳಿದ್ದಾರೆ.
ಲಡಾಕ್‍ನ ಗಾಲ್ವಾನ್ ಕಣಿವೆ ಪ್ರದೇಶದಿಂದ ಉಭಯ ದೇಶಗಳ ಸೈನ್ಯಗಳು ಹಿಂದಕ್ಕೆ ಸರಿಯಲು ಪ್ರಾರಂಭಿಸಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ ಕೆಲವೇ ದಿನಗಳಲ್ಲಿ ಗಡಿಯಲ್ಲಿ ಈ ಹಿಂಸಾತ್ಮಕ ಘಟನೆ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳ್ಳುತ್ತಿರುವ ಪ್ರಕ್ರಿಯೆಯಲ್ಲಿ ಭಾರತೀಯ ಸೈನಿಕರು ಹೇಗೆ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಎಪ್ರಿಲ್ ತಿಂಗಳಾಂತ್ಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಪ್ರಾರಂಭವಾಗಿದೆ. ಆದರೂ ಉದ್ವಿಗ್ನತೆ ಶಮನಗೊಳಿಸಲು ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ ಎಂದು ಫೈಝಿ ಹೇಳಿದ್ದಾರೆ.
ಗಡಿಯಲ್ಲಿ ಚೀನಾ ತೊಂದರೆ ನೀಡಲು ಪ್ರಾರಂಭಿಸಿ ಒಂದೂವರೆ ತಿಂಗಳು ಕಳೆದರೂ ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ಸರಕಾರ ದೇಶಕ್ಕೆ ತಿಳಿಸಿರಲಿಲ್ಲ. ಚೀನಾ ಸೈನಿಕರು ದೇಶದ ಒಳಗೆ ನುಗ್ಗಿರುವುದನ್ನು ವಿಶ್ವಾಸಾರ್ಹ ಅಂತರ್‍ರಾಷ್ಟ್ರೀಯ ಮಾಧ್ಯಮಗಳು, ವರದಿ ಮಾಡುತ್ತಿರುವಾಗಲೂ ಭಾರತದ ಪೇಯ್ಡ್ ಮಾಧ್ಯಮಗಳು ಕಣ್ಣು ಮುಚ್ಚಿಕೊಂಡಿದ್ದವು. ಚೀನಾ ಸೈನ್ಯವು ಭಾರತದ ಸುಮಾರು 60 ಚದರ ಕಿಲೋಮೀಟರ್ ಭೂಪ್ರದೇಶವನ್ನು ವಶಪಡಿಸಿಕೊಂಡಿತ್ತು ಮತ್ತು ನಮ್ಮ ಭೂ ಪ್ರದೇಶದೊಳಗೆ ಫಿರಂಗಿ ಮತ್ತು ಸೇನಾ ಶಕ್ತಿಯನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ‘ಭಾರತ ಇನ್ನು ಮುಂದೆ ದುರ್ಬಲ ದೇಶವಲ್ಲ’ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ‘ನಮಗೆ ಪಾಕಿಸ್ತಾನ ಅಥವಾ ಚೀನಾದ ಭೂಮಿ ಬೇಡ. ನಮಗೆ ಬೇಕಾಗಿರುವುದು ಶಾಂತಿ, ಸೌಹಾರ್ದತೆ, ಪ್ರೀತಿ ಮತ್ತು ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೇವೆ ಮುಂತಾದ ದುರ್ಬಲ ಹೇಳಿಕೆಗಳ ಹೊರತಾಗಿಯೂ’ ಈ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಲು ಮೋದಿ ಸರಕಾರದಿಂದ ದೃಢವಾದ ನಿಲುವು ಅಥವಾ ಗಂಭೀರ ಪ್ರಯತ್ನಗಳು ನಡೆದಿರಲಿಲ್ಲ. ಚೀನಾವನ್ನು ಎದುರಿಸಲು ಮತ್ತು ಜನರಿಗೆ ಸತ್ಯವನ್ನು ಹೇಳಲು ಸರಕಾರ ಹೆದರುತ್ತಿದೆ ಫೈಝಿ ಕಿಡಿಗಾರಿದ್ದಾರೆ.
ಪ್ರಧಾನಿಯಾದ ತಮ್ಮ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 'ದೇಶಕ್ಕೆ ಬರೆದ ಪತ್ರ'ದಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿಯ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದ ಪ್ರಧಾನಿ ಮೋದಿ, ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಈ ಅಸಮರ್ಥತೆಯಿಂದಾಗಿ ನಾವು ನಮ್ಮ ಸೈನಿಕರ ಅಮೂಲ್ಯ ಜೀವವನ್ನು ಕಳೆದುಕೊಳ್ಳುವಂತಾಗಿದೆ. ಬಲವಂತದ ದೇಶಭಕ್ತಿ ಮತ್ತು ಮಾಧ್ಯಮಗಳ ಹೊಗಳಿಕೆಯಲ್ಲಿ ಮಾತ್ರ ಸರಕಾರ ವಿಶ್ವಾಸವಿಟ್ಟಿದೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಸರಕಾರವು ವಿದೇಶಾಂಗ ನೀತಿಯಲ್ಲಿ ವಿಫಲವಾಗಿರುವುದರಿಂದ ನೇಪಾಳ ಸೇರಿದಂತೆ ನಮ್ಮ ನೆರೆಹೊರೆಯವರೆಲ್ಲರೂ ಈಗ ದೇಶವನ್ನು ಲಘುವಾಗಿ ಪರಿಗಣಿಸಿದ್ದಾರೆ. ತಮ್ಮ ಸಾರ್ವಭೌಮ ಪ್ರದೇಶದ ಭಾಗವಾಗಿ ಭಾರತೀಯ ಪ್ರಾಂತ್ಯದೊಳಗೆ ಸುಮಾರು 400 ಚದರ ಕಿಲೋಮೀಟರ್ ಭೂಮಿಯನ್ನು ಸೇರಿಸಲು ನೇಪಾಳ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಚೀನಾ ಮತ್ತು ನೇಪಾಳದ ಗಡಿಯಲ್ಲಿನ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಫೈಝಿ, ರಾಷ್ಟ್ರದ ಸಾರ್ವಭೌಮತ್ವವನ್ನು ಯಾರೂ ಉಲ್ಲಂಘಿಸದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಗಡಿಯಲ್ಲಿ ನಡೆದ ಘಟನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರಕ್ಕೆ ಸತ್ಯವನ್ನು ತಿಳಿಸಬೇಕು. ಭಾರತೀಯ ಸೇನಾ ಮುಖ್ಯಸ್ಥರು ವರದಿ ಮಾಡಿದಂತೆ ಉದ್ವಿಗ್ನತೆ ಶಮನಗೊಳ್ಳುತ್ತಿರುವ ಪ್ರಕ್ರಿಯೆಯು ಪ್ರಗತಿಯಲ್ಲಿರುವಾಗ ನಮ್ಮ ಸೈನಿಕರು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ವಿವರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







