ಗಲ್ವಾನ್ ಕಣಿವೆ ಯಾವತ್ತಿಗೂ ಭಾರತದ್ದೇ: ಗುಲಾಮ್ ರಸೂಲ್ ಗಲ್ವಾನ್ ರ ಮೊಮ್ಮಗ ಮುಹಮ್ಮದ್ ಅಮೀನ್

ಗುಲಾಮ್ ರಸೂಲ್ ಗಲ್ವಾನ್
ಹೊಸದಿಲ್ಲಿ: ಗಲ್ವಾನ್ ಕಣಿವೆ ಯಾವತ್ತಿಗೂ ಭಾರತದ ಭಾಗ ಎಂದು ಲಡಾಖಿ ಅನ್ವೇಷಕ ಗುಲಾಮ್ ರಸೂಲ್ ಗಲ್ವಾನ್ ಅವರ ಮೊಮ್ಮಗ ಮುಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ. ಲಡಾಖ್ ನ ಈ ಪ್ರಸಿದ್ಧ ಕಣಿವೆಗೆ ಗುಲಾಮ್ ರಸೂಲ್ ಗಲ್ವಾನ್ ರ ಹೆಸರನ್ನು ಅವರ ಸ್ಮರಣಾರ್ಥ ಇಡಲಾಗಿದೆ.
ತಲೆಮಾರುಗಳಿಂದ ಲಡಾಖ್ ನ ಲೇಹ್ ನಲ್ಲಿ ನೆಲೆಸಿರುವ ಅಮೀನ್ ಗಲ್ವಾನ್ ಅವರ ಜೊತೆ ndtv.com ಮಾತನಾಡಿದ್ದು, ತಮ್ಮ ನೆಲದ ಕಥೆಗಳನ್ನು ಅವರು ವಿವರಿಸಿದರು.
ಸೋಮವಾರ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯ ಬಗ್ಗೆ ಮಾತನಾಡಿದ ಅವರು, "1962ರಲ್ಲೂ ಚೀನಾ ಇದು ತನ್ನ ನೆಲ ಎಂದು ಪ್ರತಿಪಾದಿಸಿತ್ತು. ಇದು ಭಾರತದ ಭೂಭಾಗವಾಗಿದ್ದು, ಭಾರತದ ಭೂಭಾಗವಾಗಿಯೇ ಉಳಿಯಲಿದೆ. ಆಗ ಈ ನೆಲಕ್ಕಾಗಿ ನಮ್ಮ ಸೈನಿಕರು ಹೋರಾಡಿದ್ದರು. ಈಗ ಮತ್ತೊಮ್ಮೆ ಹೋರಾಡಿದ್ದಾರೆ. ನಾವು ನಮ್ಮ ಸೈನಿಕರನ್ನು ಗೌರವಿಸುತ್ತೇವೆ ಮತ್ತು ಅವರ ತ್ಯಾಗಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ” ಎಂದವರು ಹೇಳಿದರು.

(ಮುಹಮ್ಮದ್ ಅಮೀನ್ ಗಲ್ವಾನ್)
“ಕಣಿವೆಗೆ ನನ್ನ ತಾತನ ಹೆಸರನ್ನಿಡಲಾಗಿದೆ. ದಾರಿ ಕಳೆದುಕೊಂಡು ಕಂಗಾಲಾಗಿದ್ದ ಬ್ರಿಟಿಷ್ ಅನ್ವೇಷಕರಿಗೆ ಸಹಾಯ ಮಾಡಿದ ಅವರ ನೆನಪಿನಲ್ಲಿ ಈ ಹೆಸರನ್ನಿಡಲಾಗಿದೆ” ಎಂದವರು ಹೇಳಿದರು.
19ನೆ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದ ಭಾರತಕ್ಕೆ ಟಿಬೆಟ್ ವರೆಗೆ ರಷ್ಯನ್ನರು ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಆತಂಕವಿತ್ತು. ಆಗ ಈ ಪ್ರದೇಶದಲ್ಲಿ ಭಾರತದ ಬ್ರಿಟಿಷ್ ಸರಕಾರಕ್ಕೆ ಸಣ್ಣ ವಯಸ್ಸಿನವರಾಗಿದ್ದ ಗುಲಾಮ್ ರಸೂಲ್ ಗಲ್ವಾನ್ ಸಹಾಯ ಮಾಡಿದ್ದರು. ರಷ್ಯಾದ ಆಕ್ರಮಣದ ಬಗ್ಗೆ ಮಾಹಿತಿ ನೀಡುವಲ್ಲಿಯೂ ಅವರು ನೆರವಾಗಿದ್ದರು.
ಆಗಿನ ಬ್ರಿಟಿಷ್ ಅಧಿಕಾರಿ ಲಾರ್ಡ್ ಡನ್ ಮೋರ್ ಸುತ್ತಾಟದಲ್ಲಿದ್ದಾಗ ಪ್ರತಿಕೂಲ ಹವಾಮಾನದಿಂದ ಅಲ್ಲಿದ್ದವರು ದಿಕ್ಕಾಪಾಲಾಗಿದ್ದರು. “ನನ್ನ ತಾತ ದಾರಿಯೊಂದನ್ನು ಹುಡುಕಿ ಎಲ್ಲರನ್ನೂ ನದಿಯೊಂದರ ಬದಿಗೆ ಕರೆದೊಯ್ದಿದ್ದರು. ನನ್ನ ತಾತ ಕಂಡುಹಿಡಿದ ದಾರಿಯಿಂದ ಅವರೆಲ್ಲರೂ ಸಾವಿನಿಂದ ಪಾರಾಗಿದ್ದರು. ಇದರಿಂದಾಗಿ ಕಣಿವೆ ಮತ್ತು ನದಿಗೆ ತಾತನ ಹೆಸರಿಡಲಾಯಿತು” ಎಂದವರು ಹೇಳಿದರು.







