ರಾಜ್ಯದಲ್ಲಿ ಕೊರೋನ ಸೋಂಕಿಗೆ ಇಂದು 12 ಮಂದಿ ಬಲಿ: ಸಾವಿನ ಸಂಖ್ಯೆ 114ಕ್ಕೆ ಏರಿಕೆ
ಬಳ್ಳಾರಿ, ಕಲಬುರಗಿಯಲ್ಲಿ ತಲಾ 48, ದ.ಕ ಜಿಲ್ಲೆಯಲ್ಲಿ 23 ಸೇರಿ 210 ಹೊಸ ಪ್ರಕರಣಗಳು ಪತ್ತೆ

ಬೆಂಗಳೂರು, ಜೂ.18: ಕರ್ನಾಟಕದಲ್ಲಿ ಒಂದೇ ದಿನ 210 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 7,944ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 8 ಮತ್ತು ಕೊಪ್ಪಳ, ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 114ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ 12 ಸಾವು, 210 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬಳ್ಳಾರಿ 48, ಕಲಬುರಗಿ 48, ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ್ 6, ಗದಗ 5, ಹಾಸನ, ಧಾರವಾಡ ಮತ್ತು ರಾಯಚೂರಿನಲ್ಲಿ ತಲಾ 4, ದಾವಣಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 3,ವಿಜಯಪುರ, ಉತ್ತರ ಕನ್ನಡ ಮತ್ತು ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಶಿವಮೊಗ್ಗ ಮತ್ತು ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 7,944 ಕೊರೋನ ಸೋಂಕಿತರ ಪೈಕಿ 4,983 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು 179 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 114 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2843 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇಂದು 373 ವ್ಯಕ್ತಿಗಳನ್ನು ತಪಾಸಣೆ ನಡೆಸಲಾಗಿದೆ. ಅದೇ ರೀತಿ 34657 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದ್ದು, ಅದರಲ್ಲಿ 20536 ಪ್ರಥಮ ಸಂಪರ್ಕಿತರು ಹಾಗೂ 14121 ದ್ವಿತೀಯ ಸಂಪರ್ಕಿತರಾಗಿದ್ದಾರೆ. ಗುರುವಾರ 8709 ವ್ಯಕ್ತಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 8028 ಮಾದರಿಗಳು ನೆಗೆಟಿವ್ ಬಂದಿದೆ.
ಬಿಬಿಎಂಪಿ ವ್ಯಾಪ್ತಿಯ 31 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 207 ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗಿದೆ. ಉಳಿದಂತೆ ರಾಜ್ಯದ 530 ಜ್ವರಚಿಕಿತ್ಸಾಲಯದಲ್ಲಿ 23174 ವ್ಯಕ್ತಿಗಳನ್ನು ಹಾಗೂ 114 ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 1901 ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗಿದೆ







