ಉತ್ತರ ಪ್ರದೇಶದಲ್ಲಿ ಕೊರೋನ ರೋಗಿಗಳಲ್ಲಿ ಅರ್ಧದಷ್ಟು ಯುವ ಜನರು
ಸಾಂದರ್ಭಿಕ ಚಿತ್ರ
ಲಕ್ನೋ,ಜೂ.18: ವಯಸ್ಸಾದವರು ಮತ್ತು ಮಕ್ಕಳು ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದು ಸಾಮಾನ್ಯ ಗ್ರಹಿಕೆ. ಆದರೆ ಉತ್ತರ ಪ್ರದೇಶ ಸರಕಾರವು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಈ ಗ್ರಹಿಕೆಯನ್ನು ಸುಳ್ಳಾಗಿಸಿವೆ. ರಾಜ್ಯದಲ್ಲಿಯ ಒಟ್ಟು ಕೊರೋನ ವೈರಸ್ ರೋಗಿಗಳ ಪೈಕಿ ಅರ್ಧದಷ್ಟು ಜನರು ಅದರ ಯುವ ಸಮುದಾಯವಾಗಿದ್ದು,21ರಿಂದ 40 ವರ್ಷ ವಯೋಮಾನದವರಾಗಿದ್ದಾರೆ.
ಒಟ್ಟು 7,884 ಪ್ರಕರಣಗಳು ದಾಖಲಾಗಿದ್ದು,ಶೇ.51.93ರಷ್ಟು ಪ್ರಕರಣಗಳಲ್ಲಿ ರೋಗಿಗಳು ಈ ವಯೋಗುಂಪಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ರೋಗಿಗಳ ಚೇತರಿಕೆಯ ಪ್ರಮಾಣ ಶೇ.60.85ರಷ್ಟಿದ್ದು ಇದು ಅಖಿಲ ಭಾರತ ಸರಾಸರಿ (ಶೇ.52.95)ಗಿಂತ ಮೇಲೆಯೇ ಇದೆ.
ಶೇ.30ರಷ್ಟು ಪ್ರಕರಣಗಳಲ್ಲಿ ರೋಗಿಗಳು 41ರಿಂದ 60 ವರ್ಷ ವಯೋಮಾನದವರಾಗಿದ್ದಾರೆ. ಈವರೆಗೆ ಸುಮಾರು 900 ಅಂದರೆ ಕೇವಲ ಶೇ.6ರಷ್ಟು ಪ್ರಕರಣಗಳಲ್ಲಿ ರೋಗಿಗಳು ಹಿರಿಯ ಪ್ರಜೆಗಳಾಗಿದ್ದಾರೆ.
ಯುವಜನರೂ ಹಿರಿಯರಷ್ಟೇ ಕೊರೋನ ವೈರಸ್ ಅಪಾಯವನ್ನು ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿಯ ಸ್ಥಿತಿ ಇತರ ದೇಶಗಳಲ್ಲಿಯ ಸ್ಥಿತಿಗಿಂತ ಭಿನ್ನವಾಗಿದೆ. ಆ ದೇಶಗಳಲ್ಲಿ ಕಡಿಮೆ ನಿರೋಧಕ ಶಕ್ತಿಯಿಂದಾಗಿ ವಯಸ್ಸಾದವರೇ ಹೆಚ್ಚಾಗಿ ಸೋಂಕಿಗೆ ಗುರಿಯಾಗುತ್ತಿದ್ದಾರೆ.
ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಅಪಾಯವು ಕೇವಲ ವಯಸ್ಸನ್ನು ಮಾತ್ರ ಆಧರಿಸಿಲ್ಲ. ಅದು ರೋಗಿಗಳ ಅಧಿಕ ರಕ್ತದೊತ್ತಡ,ಹೃದಯ ಮತ್ತು ಶ್ವಾಸಕೋಶ ಸಮಸ್ಯೆಗಳು,ಮಧುಮೇಹ ಅಥವಾ ಕ್ಯಾನ್ಸರ್ನಂತಹ ರೋಗಗಳನ್ನು ಅವಲಂಬಿಸಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿರುವುದನ್ನು ಇಲ್ಲಿ ಗಮನಿಸಬಹುದು.